ಬೆಂಗಳೂರು, ಮಾ.12-ಮಾಜಿ ಪ್ರಧಾನಿ ದೇವೇಗೌಡರು ಮೈಸೂರಿನಿಂದ ಸ್ಪರ್ಧಿಸಬೇಕೆಂಬ ಒತ್ತಾಯಗಳಿವೆ. ಕಾಂಗ್ರೆಸ್ ಮೈಸೂರು ಅಥವಾ ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಬೇಕೆಂದು ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಂಸದಿರುವ 10 ಕ್ಷೇತ್ರ, ಜೆಡಿಎಸ್ ಸಂಸದರಿರುವ 2 ಕ್ಷೇತ್ರಗಳ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್ ಈವರೆಗಿನ ಮಾತುಕತೆಯಲ್ಲಿ ವಿಜಯಪುರ, ಬೆಂಗಳೂರು ಉತ್ತರ, ಚಿಕ್ಕಮಗಳೂರು, ಉಡುಪಿ ಕ್ಷೇತ್ರಗಳನ್ನು ಬಿಟ್ಟುಕೊಡಲು ಒಪ್ಪಿದೆ. ದೇವೇಗೌಡರು ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ಎಲ್ಲರ ಒತ್ತಾಯ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾಗಿರುವುದರಿಂದ ಅದನ್ನು ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದೆ. ಒಂದು ವೇಳೆ ಮೈಸೂರು ಕ್ಷೇತ್ರ ಬಿಟ್ಟುಕೊಡಲು ಸಾಧ್ಯವಾಗದಿದ್ದರೆ ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಬೇಕು ಎಂಬ ಬೇಡಿಕೆ ಇದೆ. ಕಾಂಗ್ರೆಸ್‍ಗೆ ಮೈಸೂರು ಹೇಗೆ ಹತ್ತಿರವೋ, ಜೆಡಿಎಸ್‍ಗೆ ತುಮಕೂರು ಅಷ್ಟೇ ಹತ್ತಿರವಿದೆ ಎಂದು ಹೇಳಿದರು.
ದೇವೇಗೌಡರು ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಈವರೆಗೂ ತೀರ್ಮಾನ ಆಗಿಲ್ಲ. ಮೈಸೂರು ಅಥವಾ ಬೆಂಗಳೂರು ಉತ್ತರ ಎರಡೂ ಕಡೆ ಅವಕಾಶಗಳಿವೆ ಎಂದು ಹೇಳಿದರು.
ಉಡುಪಿ, ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳಿಗೆ ಅಭ್ಯರ್ಥಿಗಳ ಕೊರತೆ ಇದೆ ಎಂದು ಅವರು ಹೇಳಿದರು.