ಚಿತ್ರದುರ್ಗ, ಮಾ.12- ವಿನಾಕಾರಣ ಶೀಲ ಶಂಕಿಸಿ ಜಗಳವಾಡುತ್ತಿದ್ದ ಪತಿಯನ್ನು ಕಬ್ಬಿಣದ ರಾಡ್ನಿಂದ ಹೊಡೆದು ಪತ್ನಿಯೇ ಕೊಲೆ ಮಾಡಿರುವ ಘಟನೆ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸಲಬಮ್ಮನಹಳ್ಳಿಯ ನಿವಾಸಿ ದಾಸಪ್ಪ (40) ಕೊಲೆಯಾದ ದುರ್ದೈವಿ.
ಸಲಬಮ್ಮನಹಳ್ಳಿಯಲ್ಲಿ ದಾಸಪ್ಪ-ನೇತ್ರಾವತಿ ದಂಪತಿ ವಾಸವಿದ್ದರು. ಹಲವು ತಿಂಗಳುಗಳಿಂದ ಪತ್ನಿ ನೇತ್ರಾವತಿ ಶೀಲ ಶಂಕಿಸಿ ಪತಿ ಜಗಳವಾಡುತ್ತಿದ್ದನು.
ಪ್ರತಿನಿತ್ಯ ಮನೆಗೆ ಬಂದು ಒಂದಲ್ಲ ಒಂದು ವಿಷಯ ತೆಗೆದು ಜಗಳವಾಡುತ್ತಿದ್ದ ಪತಿಯ ವರ್ತನೆಯಿಂದ ನೇತ್ರಾವತಿ ರೋಸಿ ಹೋಗಿದ್ದಳು.
ಭಾನುವಾರ ರಾತ್ರಿ ದಂಪತಿ ಮಧ್ಯೆ ಮತ್ತೆ ಜಗಳವಾಗಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ನೇತ್ರಾವತಿ ಕಬ್ಬಿಣದ ರಾಡ್ನಿಂದ ಪತಿ ದಾಸಪ್ಪ ತಲೆಗೆ ಬಲವಾಗಿ ಹೊಡೆದಿದ್ದಾಳೆ. ಹಲ್ಲೆಯಿಂದ ಕುಸಿದು ಬಿದ್ದ ದಾಸಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದರಿಂದ ಗಾಬರಿಯಾದ ನೇತ್ರಾವತಿ ಅಂದು ರಾತ್ರಿಯೇ ಶವವನ್ನು ಮನೆ ಸಮೀಪದ ಸ್ವಲ್ಪ ದೂರದಲ್ಲಿ ಗುಂಡಿ ತೆಗೆದು ಹೂತು ಹಾಕಿದ್ದರು.
ಇಂದು ಬೆಳಗ್ಗೆ ಈ ಮಾರ್ಗದಲ್ಲಿ ಹೋಗುತ್ತಿದ್ದ ದಾರಿಹೋಕರು ಗುಂಡಿಯಲ್ಲಿ ವ್ಯಕ್ತಿಯ ಕಾಲು ಕಾಣುತ್ತಿರುವುದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಐಮಂಗಲ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಗುಂಡಿಯಲ್ಲಿದ್ದ ಶವವನ್ನು ತೆಗೆದು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
ಘಟನೆ ಸಂಬಂಧ ನೇತ್ರಾವತಿಯನ್ನು ಪೊಲೀಸರು ವಸಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.






