ಗಾಂಧೀನಗರ: ನಿಮ್ಮ ಒಂದೊಂದು ಮತವೂ ನಮಗೆ ಅಸ್ತ್ರವಿದ್ದಂತೆ. ಹಾಗಾಗಿ ಯೋಚಿಸಿ ಮತಹಾಕುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ತವರು ನೆಲ ಗುಜರಾತ್ನ ಗಾಂಧೀನಗರದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಸಮಾವೇಶದಲ್ಲಿ ತಮ್ಮ ಮೊದಲ ರಾಜಕೀಯ ಭಾಷಣ ಮಾಡಿದ ಪ್ರಿಯಾಂಕಾ ಗಾಂಧಿ, ಮತದಾರರ ಒಂದೊಂದು ಮತವೂ ನಮಗೆ ಅಸ್ತ್ರವಿದ್ದಂತೆ. ದೇಶದಲ್ಲಿ ಧ್ವೇಷವನ್ನು ಹುಟ್ಟುಹಾಕಲಾಗುತ್ತಿದೆ. ನೀವು ಜಾಗೃತರಾಗಿರುವುದಕ್ಕಿಂತಲೂ ದೊಡ್ಡ ದೇಶಭಕ್ತಿ ಬೇರೊಂದಿಲ್ಲ.ಚುನಾವಣೆ ಮೂಲಕ ನಿಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದೀರಿ. ಹಾಗಾಗಿ ಎಲ್ಲರೂ ಜಾಗೃತರಾಗಿ ಮತಚಲಾವಣೆ ಮಾಡಿ ಎಂದರು.
ಮೊದಲ ಬಾರಿಗೆ ನಾನು ಗುಜರಾತಿಗೆ ಬಂದಿದ್ದು, ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಕಂಡು ಭಾವುಕಳಾಗಿದ್ದೇನೆ. ಸಬರಮತಿ ಆಶ್ರಮದಲ್ಲಿಯ ಮರಗಳ ಕೆಳಗೆ ಕುಳಿತು ಭಜನೆ ಕೇಳಿದ್ರೆ, ದೇಶಕ್ಕಾಗಿ ಮಡಿದ ವೀರ ದೇಶಭಕ್ತರು ನೆನಪಾಗುತ್ತಾರೆ. ಭಾರತ ಪ್ರೀತಿ, ಮಾನವೀಯತೆ, ಸದ್ಭಾವನೆಗಳ ಆಧಾರದಲ್ಲಿ ನಿರ್ಮಾಣವಾಗಿದೆ. ಆದ್ರೆ ಇಂದು ನಮ್ಮ ದೇಶದ ಸ್ಥಿತಿ ನೋಡಿದ್ರೆ ನನಗೆ ಬೇಸರವಾಗುತ್ತಿದೆ ಎಂದು ಹೇಳಿದರು.
ಮುಂದಿನ ಹೋರಾಟ ಸ್ವಾತಂತ್ರ್ಯ ಹೋರಾಟಕ್ಕಿಂತಲೂ ಹೆಚ್ಚಿನದ್ದು, ಅದಕ್ಕಾಗಿ ಇಂದಿನಿಂದಲೇ ಧ್ವನಿ ಎತ್ತಬೇಕಾಗಿದೆ. ಕಾಂಗ್ರೆಸ್ ಪಕ್ಷ ಈ ಹೋರಾಟ ಮತ್ತೆ ಆರಂಭಿಸಿದೆ. ಅದಕ್ಕೆ ನಿಮ್ಮೆಲ್ಲರ ಬೆಂಬಲ ಬೇಕಿದೆ ಎಂದರು. ಸ್ವತಂತ್ರಕ್ಕಾಗಿ ಗಾಂಧೀಜಿ ಇಲ್ಲಿಂದಲೇ ಮುಂದಾಗಿದ್ದರು. ಹಾಗಾಗಿ ನಾವು ಸಹ ಇಲ್ಲಿಂದಲೇ ಧ್ವನಿ ಎತ್ತುತ್ತಿದ್ದೇವೆ. ನೀವು ಈ ದೇಶವನ್ನು ನಿರ್ಮಾಣ ಮಾಡಿದ್ದು, ನಿಮ್ಮ ದೇಶಕ್ಕಾಗಿ ನೀವು ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳುವ ಸಮಯ ಬಂದಿದೆ.ಜಾಗೃತಿಯಿಂದ ಮತದಾನ ಮಾಡಿ ಎಂದು ಕರೆ ನೀಡಿದರು.
ನಿಮ್ಮ ಮತ ಒಂದು ಆಯುಧವಿದ್ದಂತೆ. ಅದು ನಿಮ್ಮನ್ನು ಸದೃಢರನ್ನಾಗಿ ಮಾಡುತ್ತದೆ. ನಿಮ್ಮ ಭವಿಷ್ಯ ರೂಪಿಸಿಕೊಳ್ಳುವ ಸಕಾಲ ಬಂದಿದ್ದು, ನೀವು ಈ ಬಾರಿ ಅತ್ಯಂತ ಜಾಗೂರಕರಾಗಿ ನಿಮ್ಮ ಮತವನ್ನು ಚಲಾಯಿಸಬೇಕು. ನಿಮ್ಮ ಬಳಿಯಿರುವ ಆಯುಧವನ್ನು ಬೇರೆಯವರ ಪಾಲಾಗದಂತೆ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಮೂರು ಪ್ರಶ್ನೆಗಳನ್ನು ಕೇಳಿರುವ ಪ್ರಿಯಾಂಕಾ ಗಾಂಧಿ, 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ಏನಾಯಿತು? ಎಲ್ಲರ ಖಾತೆಗೆ 15 ಲಕ್ಷ ರೂ. ಬರುತ್ತದೆ ಎಂಬ ಆಶ್ವಾನೆ ನೀಡಿದ್ದರು ಅದು ಎಲ್ಲಿ ಹೋಯ್ತು? ಮಹಿಳಾ ಸುರಕ್ಷತೆಗೆ ಮಾತನಾಡುವ ಕೆಲವರು ಕಳೆದ ಐದು ವರ್ಷಗಳಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
Lok Sabha election; Priyanka Gandhi,first political speech in Gujarat’s Gandhinagar