ಬೆಂಗಳೂರು, ಮಾ.12-ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಉದ್ದೇಶದಿಂದ ಉಜ್ವಲ ಅಕಾಡೆಮಿ ಉಚಿತ ತರಬೇತಿ ನೀಡಲು ನಿರ್ಧರಿಸಿದೆ ಎಂದು ಅಕಾಡೆಮಿಯ ನಿರ್ದೇಶಕ ಕೆ.ಯು. ಮಂಜುನಾಥ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈಲ್ವೆ ಇಲಾಖೆಯಲ್ಲಿ 1ಲಕ್ಷ 30 ಸಾವಿರ, ಆರ್.ಆರ್.ಬಿ.-ಎನ್. ಟಿ.ಪಿ.ಸಿ. ವಿಭಾಗದಲ್ಲಿ 35ಸಾವಿರ ಹುದ್ದೆಗಳ ನೇಮಕ ಮಾಡಲು ಅಧಿಸೂಚನೆ ಹೊರಡಿಸಿದ್ದು ನೇಮಕ ಆಯ್ಕೆ ಮಾದರಿಯ ಪರೀಕ್ಷೆ ಮೂಲಕ ನಡೆಸಲಾಗುತ್ತದೆ ಎಂದು ಹೇಳಿದರು.
ಈ ಹಿಂದೆ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ನಡೆಯುತ್ತಿದ್ದು ಸಾಕಷ್ಟು ಹೋರಾಟದ ಫಲವಾಗಿ ಪ್ರಸ್ತುತ ಪ್ರಾದೇಶಿಕ ಭಾಷೆಗಳಲ್ಲೂ ಸಹ ನೇಮಕಾತಿ ಪರೀಕ್ಷೆ ನಡೆಸಲಾಗುತ್ತಿದೆ. ಅದರಿಂದ ನಮ್ಮ ಅಕಾಡೆಮಿ ವತಿಯಿಂದ ಜಾತಿ ಮತವನ್ನು ಪರಿಗಣಿಸದೆ 150 ಅಭ್ಯರ್ಥಿಗಳಿಗೆ 2 ತಿಂಗಳ ಕಾಲ ಉಚಿತವಾಗಿ ತರಬೇತಿ ನೀಡಲಾಗುವುದಾಗಿ ತಿಳಿಸಿದರು.
ಅಭ್ಯರ್ಥಿಗಳು ವಿಜಯನಗರದ ಆರ್.ಪಿ.ಸಿ.ಲೇಔಟ್ನಲ್ಲಿರುವ ನಮ್ಮ ಸಂಸ್ಥೆಗೆ ಬಂದು ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಈಗಾಗಲೇ ನೋಂದಣಿ ಆರಂಭವಾಗಿದ್ದು ಮಾ.16 ರವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
100 ಕ್ಕೂ ಹೆಚ್ಚು ನೋಂದಣಿ ಮಾಡಿಸಿಕೊಂಡಲ್ಲಿ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿದರು.