ಬೆಂಗಳೂರು, ಮಾ.12-ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಚಿಂಚೋಳಿ ಕ್ಷೇತ್ರದ ಡಾ.ಉಮೇಶ್ ಜಾಧವ್ ಅವರು ಸ್ಪೀಕರ್ ರಮೇಶ್ಕುಮಾರ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದು, ತಮ್ಮ ರಾಜೀನಾಮೆ ಅಂಗೀಕರಿಸುವಂತೆ ಮನವಿ ಮಾಡಲು ಮುಂದಾಗಿದ್ದಾರೆ.
ಈ ಮೊದಲು ಬಂಡಾಯವೆದ್ದಿದ್ದ ಕಾಂಗ್ರೆಸ್ನ ನಾಲ್ವರು ಶಾಸಕರಾದ ಉಮೇಶ್ಜಾಧವ್, ರಮೇಶ್ಜಾರಕಿ ಹೊಳಿ, ನಾಗೇಂದ್ರ, ಮಹೇಶ್ಕುಮಟಳ್ಳಿ ವಿರುದ್ಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪೀಕರ್ ಅವರಿಗೆ ದೂರು ನೀಡಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ನಾಲ್ವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಮನವಿ ಮಾಡಿದ್ದರು.
ಆ ಪ್ರಕರಣದ ವಿಚಾರಣೆಗಾಗಿ ಇಂದು ಸ್ಪೀಕರ್ ಅವರು ವಿಚಾರಣೆಗೆ ದಿನಾಂಕ ನಿಗದಿ ಮಾಡಿದ್ದರು. ಆದರೆ ಲೋಕಸಭೆ ಚುನಾವಣೆ ಘೋಷಣೆಯಾಗಿದ್ದರಿಂದ ವಿಚಾರಣೆ ನಡೆಸುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂಬ ಕಾರಣಕ್ಕೆ ಸ್ಪೀಕರ್ ಇಂದಿನ ವಿಚಾರಣೆಯನ್ನು ಮುಂದೂಡಿದ್ದಾರೆ.
ಇದಕ್ಕೂ ಮೊದಲು ಉಮೇಶ್ ಜಾಧವ್ ಅವರು ಕಾಂಗ್ರೆಸ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ರಾಜೀನಾಮೆ ಅಂಗೀಕಾರ ಆಗಿಲ್ಲ. ಅದರ ಹೊರತಾಗಿ ಬಿಜೆಪಿ ಸೇರಿರುವ ಉಮೇಶ್ ಜಾಧವ್ ಅವರು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಸ್ಪರ್ಧಿಸಲು ಮುಂದಾಗಿದ್ದಾರೆ. ಆದರೆ ಸ್ಪೀಕರ್ ಅವರು ರಾಜೀನಾಮೆ ಅಂಗೀಕಾರ ಅಥವಾ ತಿರಸ್ಕಾರದ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದಿರುವುದರಿಂದ ಉಮೇಶ್ ಜಾಧವ್ ಅವರಿಗೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇಂದು ವಿಧಾನಸೌಧಕ್ಕೆ ಆಗಮಿಸಿ ಸ್ಪೀಕರ್ ಅವರನ್ನು ಭೇಟಿ ಮಾಡಲು ಪ್ರಯತ್ನ ನಡೆಸಿದರು. ಆದರೆ ಸ್ಪೀಕರ್ ಅವರು ಊರಿನಲ್ಲಿ ಇಲ್ಲದಿದ್ದರಿಂದ ಭೇಟಿ ಸಾಧ್ಯವಾಗಿಲ್ಲ. ಆದರೆ ವಿಧಾನಸಭೆ ಕಾರ್ಯದರ್ಶಿಯವರಿಗೆ ತಮ್ಮ ಲಿಖಿತ ಹೇಳಿಕೆಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಉಮೇಶ್ ಜಾಧವ್ ಅವರು, ನಾನು ಈ ಮೊದಲು ಮಾ.4 ರಂದು ಸ್ಪೀಕರ್ ಅವರನ್ನು ಕೋಲಾರ ಜಿಲ್ಲೆ ಅದಗಲ ಗ್ರಾಮದಲ್ಲಿ ಭೇಟಿಯಾಗಿ ರಾಜೀನಾಮೆ ನೀಡಿದ್ದೇನೆ. ಈ ಬಗ್ಗೆ ಕೆಲವು ಸ್ಪಷ್ಟೀಕರಣ ಬೇಕೆಂದು ವಿಧಾನಸಭೆ ಕಾರ್ಯದರ್ಶಿ ವಿಜಯಲಕ್ಷ್ಮಿ ಅವರು ಪತ್ರ ಬರೆದಿದ್ದರು.
ಹಾಗಾಗಿ ಇಂದು ನಾನು ಖುದ್ದಾಗಿ ಸ್ಪೀಕರ್ ಅವರನ್ನು ಭೇಟಿಯಾಗಲು ಬಂದಿದ್ದೆ. ಅವರು ಊರಿನಲ್ಲಿ ಇಲ್ಲದೆ ಇರುವುದರಿಂದ ಕಾರ್ಯದರ್ಶಿಯವರಿಗೆ ಪತ್ರ ನೀಡಿದ್ದೇನೆ ಎಂದು ಹೇಳಿದರು.
ಸ್ಪೀಕರ್ ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ನನ್ನ ತಂದೆ-ತಾಯಿಯಷ್ಟೇ ಸ್ಪೀಕರ್ ಅವರನ್ನೂ ನಂಬುತ್ತೇನೆ. ಅವರ ಯಾರ ಒತ್ತಡಕ್ಕೂ ಮಣಿಯದೆ ನನ್ನ ರಾಜೀನಾಮೆ ಅಂಗೀಕರಿಸುತ್ತಾರೆ ಎಂಬ ನಂಬಿಕೆ ಇದೆ. ಇತರ ಶಾಸಕರಾದ ರಮೇಶ್ಜಾರಕಿ ಹೊಳಿ, ನಾಗೇಂದ್ರ, ಮಹೇಶ್ ಕುಮಟಳ್ಳಿ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ನಾನು ವೈದ್ಯನಾಗಿದ್ದು, ವಿದ್ಯಾವಂತನಾಗಿದ್ದೇನೆ. ರಾಜಕೀಯದ ಒಳಸುಳಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಕಲಬುರಗಿ ಲೋಕಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಸ್ಪರ್ಧಿಸುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲೆ ಇದೆ.
ಚುನಾವಣೆ ಮುಗಿದು ಮೇ 23ಕ್ಕೆ ಜನ ತೀರ್ಮಾನ ಮಾಡುತ್ತಾರೆ ಎಂದು ಅವರು ಹೇಳಿದರು.