ನವದೆಹಲಿ,ಮಾ.11- ಹೈ ವೋಲ್ಟೇಜ್ ಲೋಕಸಭಾ ಚುನಾವಣಾ ದಿನಾಂಕ ಪ್ರಕಟವಾಗುತ್ತಿದ್ದಂತೆ ಎಲ್ಲ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.
ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಪ್ರಾಬಲ್ಯವನ್ನು ಮಣಿಸಲು ಹೊಸ ಚುನಾವಣಾ ಕಾರ್ಯತಂತ್ರಕ್ಕೆ ಮೊರೆ ಹೋಗಿದೆ.
ಮೋದಿ ಪ್ರಭಾವನ್ನು ಶತಾಯಗತಾಯ ಕೊನೆಗಾಣಿಸಲು ಕಾಂಗ್ರೆಸ್ 15 ವರ್ಷಗಳ ಹಿಂದಿನ ರಣತಂತ್ರಕ್ಕೆ ಮೊರೆ ಹೋಗಿದೆ. 2004ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ವೇಳೆ ಪ್ರಾದೇಶಿಕ ಪಕ್ಷಗಳ ಮೈತ್ರಿಯೊಂದಿಗೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಗದ್ದುಗೆಗೇರಿದ ತಂತ್ರವನ್ನೇ ಈ ಬಾರಿಯೂ ಅನುಸರಿಸಲು ಮುಂದಾಗಿದೆ.
ಇದಕ್ಕಾಗಿ ಆಯಾ ರಾಜ್ಯಗಳಲ್ಲಿ ಪ್ರಬಲವಾಗಿರುವ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಸಾಧಿಸಿ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಹೊಸ ತಂತ್ರ ರೂಪಿಸಿದೆ.
ಕಾಂಗ್ರೆಸ್ ತಂತ್ರ ಏನು?:
ಈಗಾಗಲೇ ಸಮಾನಮನಸ್ಕ ಪಕ್ಷಗಳೊಂದಿಗೆ ಮಹಾಮೈತ್ರಿಗೆ ಸಿದ್ಧವಾಗಿರುವ ಕಾಂಗ್ರೆಸ್ ಆಯಾ ರಾಜ್ಯಗಳಲ್ಲಿನ ಪ್ರಮುಖ ಪಕ್ಷಗಳೊಂದಿಗೆ ಕೈ ಜೋಡಿಸಲು ಸಿದ್ದವಾಗಿದೆ. ಅದರಂತೆ ಕರ್ನಾಟಕದಲ್ಲಿ ಜೆಡಿಎಸ್(ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವದಲ್ಲಿದೆ), ಬಿಹಾರದಲ್ಲಿ ಆರ್‍ಜೆಡಿ, ಮಹಾರಾಷ್ಟ್ರದಲ್ಲಿ ಎನ್‍ಸಿಪಿ, ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಎಲ್‍ಡಿಎಫ್, ಜಾರ್ಖಂಡ್‍ನಲ್ಲಿ ಜೆಎಂಎಂ, ಜಮ್ಮುಕಾಶ್ಮೀರದಲ್ಲಿ ಎನ್‍ಸಿಪಿ ಸೇರಿದಂತೆ ಆಯಾ ರಾಜ್ಯಗಳ ಪ್ರಭಾವಿ ಪ್ರಾದೇಶಿಕ ಪಕ್ಷಗಳೊಂದಿಗೆ ಸಖ್ಯ ಹೊಂದಲು ಕಾಂಗ್ರೆಸ್ ಹವಣಿಸಿದೆ.
ಇದೇ ವೇಳೆ ದೆಹಲಿಯಲ್ಲಿ ಎಎಪಿ ಜೊತೆ ಮೈತ್ರಿಗೂ ಸಂಧಾನ ಮಾತುಕತೆಯಲ್ಲಿ ಕಾರ್ಯೋನ್ಮುಖವಾಗಿದೆ. ಆದರೆ ಆಂಧ್ರ ಮತ್ತು ತೆಲಾಂಗಣ ರಾಜ್ಯಗಳಲ್ಲಿ ಕಾಂಗ್ರೆಸ್ ದುರ್ಬಲವಾಗಿರುವುದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಚಿಂತೆಗೀಡು ಮಾಡಿದೆ.
ಒಟ್ಟಾರೆ ಇನ್ನೆರಡು ಮೂರು ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಸಂಪೂರ್ಣ ಮೈತ್ರಿ ಹೊಂದಾಣಿಕೆ ಮತ್ತು ಸೀಟು ಹಂಚಿಕೆ ಬಗ್ಗೆ ಅಂತಿಮ ನಿರ್ಧಾರ ಪ್ರಕಟವಾಗಲಿದ್ದು, 2019ರ ಲೋಕಸಭಾ ಚುನಾವಣೆ ಕುರುಕ್ಷೇತ್ರದ ಕದನ ಕುತೂಹಲ ಕೆರಳಿಸಿದೆ.