ನಾಲತವಾಡ ಪಟ್ಟಣದಲ್ಲಿ ವಿಚಿತ್ರ ಮದುವೆ-ವಧುವಿನಿಂದಲೇ ವರನಿಗೆ ಮಾಂಗಲ್ಯಧಾರಣೆ

ವಿಜಯಪುರ, ಮಾ.12- ಇದೊಂದು ವಿಚಿತ್ರ ಮದುವೆ..! ಸಾಮಾನ್ಯವಾಗಿ ವರ ವಧುವಿಗೆ ತಾಳಿ ಕಟ್ಟುವುದು ಲೋಕಾರೂಢಿ. ಆದರೆ, ನಾಲತವಾಡ ಪಟ್ಟಣದಲ್ಲಿ ಹಿರಿಯರು ವಧುವಿನಿಂದಲೇ ವರನಿಗೆ ಮಾಂಗಲ್ಯಧಾರಣೆ ಮಾಡಿಸಿ ವಿಶಿಷ್ಠ ಮದುವೆ ಮಾಡಿಸಿದ್ದಾರೆ.

ಪ್ರಭುರಾಜ್ ಜತೆ ಅಂಕಿತಾ ಹಾಗೂ ಅಮಿತ್ ಜತೆ ಪ್ರಿಯಾ ಎಂಬ ಎರಡು ಜೊಡಿಯ ಮದುವೆಯಾಗಿದ್ದು, ಇಲ್ಲಿ ಇಬ್ಬರು ವರರಿಗೆ ವಧುಗಳೇ ತಾಳಿ ಕಟ್ಟಿದ್ದು ವಿಶೇಷವಾಗಿತ್ತು.

ತಾಳಿಯ ಜತೆ ರುದ್ರಾಕ್ಷಿ ಪೋಣಿಸಿ ತಾಳಿ ಕಟ್ಟುವ ಮೂಲಕ 12ನೆ ಶತಮಾನದ ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಲಾಯಿತು. ಅಪ್ಪಟ ಬಸವ ಧರ್ಮದ ತತ್ವದ ಅಡಿಯಲ್ಲಿ ನಡೆದ ಮದುವೆ ಇದಾಗಿದ್ದು, ಶುಭ ಮುಹೂರ್ತ ನೋಡದೆ ಮದುವೆ ಮಾಡಿಸಲಾಗಿದೆ. ವಧು-ವರರಿಗೆ ಅಕ್ಷತೆ ಬದಲು ಪುಷ್ಪವೃಷ್ಟಿ ಹಾಕಿ ಹಿರಿಯರು ಆಶೀರ್ವಾದ ಮಾಡಿದ್ದಾರೆ.

ಈ ಮದುವೆಯಲ್ಲಿ ಇನ್ನೊಂದು ವಿಶೇಷವೇನೆಂದರೆ, ಮದುವೆಗೆ ಬಂದವರಿಗೆ ಬಸವಣ್ಣನವರ ಕುರಿತಾದ ವಚನಸುಧೆ, ವಚನವರ್ಷ ಪುಸ್ತಕಗಳ ವಿತರಣೆ ಮಾಡಲಾಯಿತು. ಜಾತ್ಯಾತೀತ ನಿಲುವಿನ ಬಸವ ಧರ್ಮದ ಮದುವೆ ಇದಾಗಿತ್ತು. ಇಳಕಲ್ಲದ ಶ್ರೀ ಗುರುಮಹಾಂತೇಶ್ವರ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶರಣರು, ಲಿಂಗಸೂರಿನ ವಿಜಯ ಮಹಾಂತೇಶ ಮಠದ ಸಿದ್ಧಲಿಂಗ ಶ್ರೀಗಳು ಸೇರಿದಂತೆ ಅನೇಕ ಗಣ್ಯರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವ ವಧು-ವರರಿಗೆ ಆಶೀರ್ವದಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ