ಚೆನ್ನೈ: ಲೋಕಸಭಾ ಚುನಾವಣೆಗೆ ದಿನಗನನೆ ಆರಂಭವಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ತಮಿಳುನಾಡಿನ ಹಿರಿಯ ನಟ ಹಾಗೂ ರಾಜಕಾರಣಿ ವಿಜಯಕಾಂತ್ ಅವರ ಡಿಎಂಡಿಕೆ ಪಕ್ಷ ಬಿಜೆಪಿ ಹಾಗೂ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿದೆ.
ವಿಜಯಕಾಂತ್ ಅವರ ಡಿಎಂಡಿಕೆ(ದೇಶಿಯ ಮರ್ಪೋಕು ದ್ರಾವಿಡ ಕಳಗಂ) ಪಕ್ಷ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಮತ್ತು ಅದರ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಪಿಎಂಕೆ(ಪಟ್ಟಲಿ ಮಕ್ಕಳ್ ಕಟ್ಚಿ) ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಈ ಕುರಿತು ನಟ ವಿಜಯಕಾಂತ್ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಡಿಎಂಡಿಕೆ ಪಕ್ಷವು ತಮಿಳುನಾಡಿನ ಒಟ್ಟಾರೆ 39 ಲೋಕಸಭಾ ಸ್ಥಾನಗಳಲ್ಲಿ 4 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ.
ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಒ. ಪನ್ನಿರ್ಸೆಲ್ವಂ ಹಾಗೂ ವಿಜಯಕಾಂತ್ ಮತ್ತು ಡಿಎಂಡಿಕೆ ಖಜಾಂಚಿ, ಪತ್ನಿ ಪ್ರೇಮಲತಾ ಅವರ ಸಮ್ಮುಖದಲ್ಲಿ ಉಭಯ ಪಕ್ಷದ ಉನ್ನತ ನಾಯಕರ ನಡುವೆ ಈ ಒಪ್ಪಂದ ನಡೆದಿದೆ.
ತಮಿಳುನಾಡಿನ ಉತ್ತರ ಭಾಗದಲ್ಲಿ ಸಕ್ರಿಯವಾಗಿರುವ ವಿಜಯಕಾಂತ್ ಪಕ್ಷ ಪಿಎಂಕೆ ಪಕ್ಷಕ್ಕೆ ಸಮಾನಾವಾಗಿ 7 ಸ್ಥಾನಗಳನ್ನು ನೀಡುವಂತೆ ಕೇಳಿಕೊಂಡಿತ್ತು. ಆದರೆ, ಅಂತಿಮವಾಗಿ ಎಐಡಿಎಂಕೆ 4 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ.
ಮೈತ್ರಿ ಪಕ್ಷಗಳ ಒಪ್ಪಂದದಂತೆ ತಮಿಳುನಾಡಿನ 5 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು, 7 ಸ್ಥಾನಗಳಲ್ಲಿ ಪಿಎಂಕೆ ಕಣಕ್ಕಿಳಿಯಲಿದೆ. ಪಿಟಿ, ಎನ್ಜೆಆರ್ ಮತ್ತು ಎನ್ಆರ್ ಕಾಂಗ್ರೆಸ್ ಪಕ್ಷಗಳು ತಲಾ ಒಂದೊಂದು ಪಕ್ಷದಲ್ಲಿ ಸ್ಪರ್ಧಿಸಲಿವೆ.
Vijayakanth’s DMDK joins AIADMK-BJP alliance for Lok Sabha poll in Tamil Nadu