ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ ಈ ಬಾರಿಯ ಪದ್ಮ ಪ್ರಶಸ್ತಿ ಪಡೆದ ಎಲ್ಲ ರಂಗದ ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನ ನೀಡಿ ಗೌರವಿಸಿದರು. ರಾಷ್ಟ್ರಪತಿ ಭವನದ ಅಶೋಕ ಹಾಲಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನ ನೀಡಿ ಸನ್ಮಾನಿಸಿದರು. ವಿಶ್ವಮಟ್ಟದ ಕಬಡ್ಡಿಯಲ್ಲಿ ಮಿಂಚು ಹರಿಸಿದ್ದ ಭಾರತೀಯ ಕಬಡ್ಡಿ ಕ್ಯಾಪ್ಟನ್ ಅಜಯ್ ಠಾಕೂರ್ಗೆ ರಾಷ್ಟ್ರಪತಿ ಕೋವಿಂದ್ ಪದ್ಮ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಮಾಜಿ ಪತ್ರಕರ್ತ ದಿ. ಕುಲ್ದೀಪ್ ನಾಯರ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ನಾಯರ್ ಪರ ಭಾರತಿ ನಾಯರ್ ಪ್ರಶಸ್ತಿ ಸ್ವೀಕರಿಸಿದರು. ಇನ್ನು ಡ್ರಮ್ ವಾದಕ ಆನಂದನ್ ಶಿವಮಣಿ ಅವರಿಗೆ ಪದ್ಮಶ್ರೀ, ಕುಸ್ತಿಯಲ್ಲಿ ಮಿಂಚು ಹರಿಸಿರುವ ಬಜರಂಗ್ ಪುನಿಯಾ, ಸಂಗೀತ ನಿರ್ದೇಶಕ ಶಂಕರ್ ಮಹಾದೇವನ್, ಚಿತ್ರ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ್ , ಟೆನಿಸ್ ಆಟಗಾರ ಶರತ್ ಕಮಲ್, ಚೆಸ್ ಗ್ರಾಂಡ್ಮಾಸ್ಟರ್ ಹರಿಕಾ ಡ್ರೋನಾವಲ್ಲಿ, ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಬ್ರಹ್ಮಣ್ಯಂ ಜೈಶಂಕರ್ ಅವರಿಗೆ ರಾಷ್ಟ್ರಪತಿಗಳು ಪದ್ಮಶ್ರೀ ಗೌರವ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇನ್ನು ಸರ್ದಾರ್ ಸುಖದೇವ್ ಸಿಂಗ್ ಧಿಂಡ್ಸಾ ಅವರಿಗೆ ಪದ್ಮಭೂಷಣ ಹಾಗೂ ಹುಕುಂದೇವ್ ನಾರಾಯಣ ಅವರಿಗೆ ಪದ್ಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.