ಬೆಂಗಳೂರು, ಮಾ.11- ಮಂಡ್ಯ ಲೋಕಸಭೆ ಚುನಾವಣಾ ಕಣ ರಾಜ್ಯದಲ್ಲಷ್ಟೇ ಅಲ್ಲದೆ ದೇಶದಲ್ಲೇ ಬಹುಚರ್ಚಿತ ಕ್ಷೇತ್ರವಾಗಿದೆ. ಮಂಡ್ಯದಲ್ಲಿ ಸುಮಲತಾ ಅವರು ಸ್ಪರ್ಧಿಸದಂತೆ ಮನವೊಲಿಸುವ ಜವಾಬ್ದಾರಿಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ಗೆ ವಹಿಸಲಾಗಿತ್ತು. ಆದರೆ, ಸುಮಲತಾ ಅವರು ಯಾರ ಮಾತಿಗೂ ಸೊಪ್ಪು ಹಾಕದೆ ತಾವು ಸ್ಪರ್ಧೆ ಮಾಡುವುದು ಖಚಿತ ಎಂಬ ಸಂದೇಶ ರವಾನಿಸಿದ್ದಾರೆ.
ಇಂದು ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆಯುವ ಮೂಲಕ ಮಂಡ್ಯ ಜನರ ಜತೆ ಸಾಮಾಜಿಕ ಜಾಲತಾಣದಲ್ಲೂ ಸಂಪರ್ಕದಲ್ಲಿರುತ್ತೇನೆ ಎಂದು ಘೋಷಿಸಿದ್ದಾರೆ.
ಸುಮಲತಾ ಅವರು ಪಟ್ಟು ಸಡಿಲಸದ ಹಿನ್ನೆಲೆಯಲ್ಲಿ ನಿನ್ನೆ ಸಚಿವ ಡಿ.ಕೆ.ಶಿವಕುಮಾರ್ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರ ಸಭೆ ನಡೆಸಿದರು. ಸಭೆಯಲ್ಲಿ ಮಂಡ್ಯ ಜಿಲ್ಲೆಯ ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಮುಖಂಡರು ಭಾಗವಹಿಸಿದ್ದರು.
ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ಬಗ್ಗೆ ಎಲ್ಲಾ ನಾಯಕರು ಅಸಮಾಧಾನ ವ್ಯಕ್ತಪಡಿಸಿದರು. ಆದರೆ, ರಾಜಕೀಯ ಹೊಂದಾಣಿಕೆಯಲ್ಲಿ ಕೊಟ್ಟು-ತೆಗೆದುಕೊಳ್ಳುವುದು ಅನಿವಾರ್ಯ ಎಂದು ಡಿ.ಕೆ.ಶಿವಕುಮಾರ್ ಮನವೊಲಿಸಿದ್ದು, ಮೈತ್ರಿ ಸರ್ಕಾರದ ಭದ್ರತೆಗಾಗಿ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನೇ ಬೆಂಬಲಿಸಬೇಕೆಂದು ಹೈಕಮಾಂಡ್ನ ಸೂಚನೆಯಾಗಿದೆ. ಹಾಗಾಗಿ ಜಿಲ್ಲೆಯ ನಾಯಕರು ಈ ಬಾರಿ ಮೈತ್ರಿಯ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಡಿಕೆಶಿ ಮನವಿ ಮಾಡಿದ್ದಾರೆ.
ಈ ನಡುವೆ ಮಂಡ್ಯ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಕೂಡ ತಯಾರಿ ನಡೆಸಿದೆ. ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಬಾಹ್ಯ ಬೆಂಬಲ ನೀಡಲಿದೆ ಎಂಬ ಮಾತುಗಳಿದ್ದವು. ಆದರೆ, ಜಿಲ್ಲೆಯ ರಾಜಕಾರಣದಲ್ಲಾದ ಹಲವಾರು ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಮುಖಂಡರು ತಮ್ಮ ಅಭ್ಯರ್ಥಿಯನ್ನೂ ಕಣಕ್ಕಿಳಿಸಿ ಕಾಂಗ್ರೆಸ್-ಜೆಡಿಎಸ್ ನಡುವಿನ ಒಳ ಜಗಳ ಮತ್ತು ಸುಮಲತಾ ಅವರ ಬಂಡಾಯ ಸ್ಪರ್ಧೆಯ ಲಾಭ ಪಡೆಯಲು ಚರ್ಚೆ ನಡೆಸಿದ್ದಾರೆ.
ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಗಳೂರು ಗ್ರಾಮಾಂತರ , ಬಳ್ಳಾರಿ ಮತ್ತು ಮಂಡ್ಯ ಕ್ಷೇತ್ರದ ಚುನಾವಣೆಯ ಉಸ್ತುವಾರಿ ವಹಿಸುವ ಸಾಧ್ಯತೆ ಇದೆ.