ಬೆಂಗಳೂರು, ಮಾ.11-ಏಪ್ರಿಲ್ 18 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೂರು ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಬಿಬಿಎಂಪಿ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳು, ಬಿಬಿಎಂಪಿ ಆಯುಕ್ತರೂ ಆದ ಮಂಜುನಾಥ್ ಪ್ರಸಾದ್ ತಿಳಿಸಿದರು.
ಜಂಟಿಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 5 ಗಂಟೆಯೊಳಗೆ ಸರ್ಕಾರದ ಎಲ್ಲಾ ಜಾಹೀರಾತುಗಳನ್ನು ತೆಗೆಯಲಾಗುವುದು, ಬಸ್‍ಶೆಲ್ಟರ್ ಸೇರಿದಂತೆ ಎಲ್ಲೆಡೆ ರಾಜಕೀಯ ಮುಖಂಡರ ಭಾವಚಿತ್ರವಿರುವ ಫ್ಲೆಕ್ಸ್‍ಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು.
ಸರ್ಕಾರದ ವೆಬ್‍ಸೈಟ್‍ನಲ್ಲಿರುವ ಭಾವಚಿತ್ರಗಳನ್ನು ತೆಗೆಯಲಾಗಿದೆ. ಜನನಾಯಕರಿಗೆ ನೀಡಿದ್ದ ಸರ್ಕಾರಿ ವಾಹನಗಳನ್ನು ವಾಪಸ್ ಪಡೆಯಲಾಗಿದೆ. ಚುನಾವಣಾ ಪ್ರಕ್ರಿಯೆಗಳನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ನಾಳೆ ಕೇಂದ್ರದಿಂದ ಎಕ್ಸ್‍ಪೆಂಡಿಚರ್ ಅಬರ್ಸವರ್ಸ್ ಬರಲಿದ್ದಾರೆ ಎಂದು ಹೇಳಿದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಅಪರ ಆಯುಕ್ತರ ಕಚೇರಿ, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬೇಕು. ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಗಳು ಜಯನಗರ 2ನೇ ಬ್ಲಾಕ್, ಬಿಬಿಎಂಪಿ ಕಚೇರಿಯಲ್ಲೇ ನಾಮಪತ್ರ ಸಲ್ಲಿಸಬೇಕು ಎಂದು ತಿಳಿಸಿದರು.
ನಾಮ ಪತ್ರ ಸಲ್ಲಿಸಲು ಮಾ.26 ಕೊನೆಯ ದಿನಾಂಕವಾಗಿದ್ದು, ನಾಮಪತ್ರ ಹಿಂಪಡೆಯಲು ಮಾ.29 ಅಂತಿಮ ದಿನವಾಗಿದೆ. ಏಪ್ರಿಲ್ 18 ರಂದು ಮೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ 88,81,066ಒಟ್ಟು ಮತದಾರರಿದ್ದು, ಅದರಲ್ಲಿ 46,32,900 ಮಂದಿ ಪುರುಷ ಮತದಾರರಿದ್ದು, 42,48,166 ಮಂದಿ ಮಹಿಳಾ ಮತದಾರರಿದ್ದಾರೆ.
ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮುಂಚೆ ಚುನಾವಣಾ ಆಯೋಗದ ಅನುಮತಿ ಪಡೆಯುವುದು ಕಡ್ಡಾಯ. ಜಾಹೀರಾತಿನ ವಿವರಣೆಯನ್ನು ಮೊದಲೇ ನೀಡಿರಬೇಕು. ಅನುಮತಿ ಪಡೆದ ಮೇಲೆ ಪತ್ರಿಕೆಗಳು, ಟಿವಿಗಳಿಗೆ ಜಾಹೀರಾತು ನೀಡಬಹುದು ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.
ನಕಲಿ ಮತದಾರರ ಪಟ್ಟಿಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಬೇರೆಯವರ ಗುರುತಿನ ಚೀಟಿ ಇಟ್ಟುಕೊಂಡಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಾಲು ಸಾಲು ರಜೆ ಹಿನ್ನೆಲೆ ಮತದಾರರಲ್ಲಿ ಚುನಾವಣೆ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದ ಅವರು ಕಳೆದ ಬಾರಿಗಿಂತ ಹೆಚ್ಚು ಮತದಾನ ಆಗುವ ನೀರಿಕ್ಷೆಯಿದೆ ಎಂದು ತಿಳಿಸಿದರು.
ಪ್ಲೇಯಿಂಗ್ ಸ್ಕ್ವಾಡ್
ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಮಾತನಾಡಿ ನಗರದಲ್ಲಿ ಶಾಂತಿಯುತ ಮತದಾನ ನಡೆಯಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಚುನಾವಣೆ ಹಿನ್ನಲೆಯಲ್ಲಿ ಸಕಲ ಭದ್ರತೆ ಕೈಗೊಳ್ಳಲಾಗುವುದು ಚುನಾವಣಾಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಇರುವ ಕಡೆ ಪ್ಲೇಯಿಂಗ್ ಸ್ಕ್ವಾಡ್ ನಿಯೋಜಿಸಲಾಗುವುದು ಎಂದು ಹೇಳಿದರು.
ಸಿಂಗಲ್ ವಿಂಡೋ ವ್ಯವಸ್ಥೆಯಲ್ಲಿ ಸಭೆ ಸಮಾರಂಭಗಳಲ್ಲಿ ಅನುಮತಿ ಪಡೆಯಬೇಕು.ಈಗಾಗಲೇ ಲೈಸನ್ಸ್ ಹೊಂದಿರುವ ಬಂದೂಕನ್ನು ತಕ್ಷಣವೆ ಹತ್ತಿರದ ಠಾಣೆಗಳಿಗೆ ಹಸ್ತಾಂತರಿಸಬೇಕು ಎಂದು ತಿಳಿಸಿದರು.
ರೌಡಿ ಶೀಟರ್‍ಗಳ ಮೇಲೆ ನಿಗಾ
ರೌಡಿ ಶೀಟರ್‍ಗಳ ಮೇಲೆ ಈಗಾಗಲೇ ತೀವ್ರ ನಿಗಾ ಇಡಲಾಗಿದೆ. ಗೂಂಡಾ ಕಾಯ್ದೆಯಡಿ ಕೆಲವರನ್ನು ವಶಕ್ಕೆ ಪಡೆಯಲಾಗುವುದು ಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚಿನ ಬಂದೋಬಸ್ತ್ ಮಾಡಲಾಗುವುದು ಶೀಘ್ರವೇ ಪ್ಯಾರಾ ಮಿಲಿಟರಿ ಪಡೆ ನಗರಕ್ಕೆ ಬರಲಿದೆ ಎಂದು ತಿಳಿಸಿದರು.
ರೂಟ್ ಮಾರ್ಚ್‍ನ್ನು ಕೂಡಲೇ ಮಾಡಲಾಗುವುದು ನಾನ್‍ಬೆಲೆಬಲ್ ವಾರೆಂಟ್‍ಗಳ ಬಗ್ಗೆಯೂ ಚುನಾವಣಾ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು ವಿಧಾನ ಸಭಾ ಚುನಾವಣೆ ವೇಳೆ 300ದೂರುಗಳು ದಾಖಲಾಗಿದ್ದವು ಎಂದು ಹೇಳಿದ ಅವರು ನಗರದಲ್ಲಿ ಶಾಂತಿಯುತ ಮತದಾನ ಮಾಡಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.