ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಕಳ್ಳನ ಬಂಧನ

ಮೈಸೂರು,ಮಾ.11-ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಕಳ್ಳ ಹಾಗೂ ಕಳವು ಮಾಲು ಸ್ವೀಕರಿಸುತ್ತಿದ್ದ ಚಿನ್ನದಂಗಡಿ ಮಾಲೀಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬನ್ನಿಮಂಟಪದ ಎಲ್ಲಮ್ಮ ಕಾಲೋನಿ ವಾಸಿ ಮಯೂರ(37) ಹಾಗೂ ಮೇಟಗಳ್ಳಿಯ ಬಿ.ಎಂ.ಶ್ರೀನಗರದ ಬಾಲಾಜಿ ಬ್ಯಾಂಕರ್ಸ್ ಮತ್ತು ಜ್ಯುವೆಲರ್ಸ್ ಮಾಲೀಕ ಲಕ್ಷ್ಮಣ್(39) ಬಂಧಿತ ಆರೋಪಿಗಳು.

ಕಳವು ಮಾಡುತ್ತಿದ್ದ ಮಯೂರನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ರಾಮಕೃಷ್ಣನಗರದ ಶನೈಶ್ವರ ಸ್ವಾಮಿ ದೇವಸ್ಥಾನದ ಅಶೋಕಪುರಂ ಮರುಲೇಶ್ವರ ದೇವಾಲಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾನೆ.

ಈತನಿಂದ 3 ಲಕ್ಷದ 80 ಸಾವಿರ ರೂ. ಮೌಲ್ಯದ 170 ಗ್ರಾಂ ಚಿನ್ನಾಭರಣ 240 ಗ್ರಾಂ ಬೆಳ್ಳಿ ಪದಾರ್ಥ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಮಯೂರ ಈ ಹಿಂದೆಯೂ ಕುವೆಂಪುನಗರ, ನಜರ್‍ಬಾದ್, ಮಂಡ್ಯ ಗ್ರಾಮಾಂತರ, ರಾಮನಗರ, ಕನಕಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ದೇವಾಲಯಗಳಲ್ಲಿ ಕಳವು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ಸಹಚರರ ಪತ್ತೆಗೆ ಬಲೆ ಬೀಸಲಾಗಿದೆ. ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಕೃಷಣರಾಜ ವಿಭಾಗದಲ್ಲಿ ಧರ್ಮಪ್ಪನವರ ನೇತೃತ್ವದ ಕುವೆಂಪುನಗರ ಇನ್‍ಸ್ಪೆಕ್ಟರ್ ರಾಜು, ಪಿಎಸ್‍ಐ ರಘು, ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ