ಮಂಗಳೂರು,ಮಾ.9- ಚಿತ್ರನಟ ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತಾ ಅವರ ಬಗ್ಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರವರ ಕ್ಷುಲ್ಲಕ ಹೇಳಿಕೆಗೆ ಮಂಡ್ಯ ಜಿಲ್ಲೆಯ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷವಿರಲಿ, ವ್ಯಕ್ತಿಗಳಾಗಿರಲಿ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಸುಮಲತಾ ಅವರು ಅಂಬರೀಶ್ ಅವರ ಧರ್ಮಪತ್ನಿ ಜೊತೆಗೆ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದೆ. ಅಂಥವರ ಬಗ್ಗೆ ರೇವಣ್ಣ ಇಷ್ಟು ಹಗುರವಾಗಿ ಮಾತನಾಡಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಅಂಬರೀಶ್ ಬದುಕಿದ್ದಾಗ ಅವರಿಂದ ಸಹಾಯ ಪಡೆದವರು ಸುಮಲತಾ ಅವರನ್ನು ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿದ್ದರಲ್ಲಿ ಯಾವ ತಪ್ಪೂ ಇಲ್ಲ. ಈ ಬಗ್ಗೆ ಸುಮಲತಾ ಅವರೇ ಅಂತಿಮವಾಗಿ ನಿರ್ಧಾರ ಕೈಗೊಳ್ಳುವವರು. ಆದರೆ ರೇವಣ್ಣ ಇವರ ಬಗ್ಗೆ ಹಗುರವಾಗಿ ಮಾತನಾಡುವುದು ಶೋಭೆ ತರುವಂತದ್ದಲ್ಲ ಎಂದು ಆಕ್ಷೇಪಿಸಿದರು.
ಸುಮಲತಾ ಕನ್ನಡದ ಮಗಳು. ಮಂಡ್ಯದ ಜನತೆ ಸೊಸೆ ಎಂದೇ ಭಾವಿಸಿದ್ದಾರೆ. ನಿಮಗೆ ಧೈರ್ಯವಿದ್ದರೆ ಚುನಾವಣೆಯನ್ನು ಎದುರಿಸಿ. ಎದುರಾಳಿಗಳ ಆತ್ಮಸ್ಥೈರ್ಯ ಕುಗ್ಗಿಸುವ ನೀಚ ಕೃತ್ಯಕ್ಕೆ ಕೈ ಹಾಕಬೇಡಿ ಎಂದು ಸಲಹೆ ಮಾಡಿದರು.
ಸುಮಲತಾ ಅವರಿಗೆ ಚುನಾವಣೆಯಲ್ಲಿ ಬೆಂಬಲ ನೀಡಬೇಕೆ, ಬೇಡವೇ ಎಂಬುದು ಇನ್ನು ನಿರ್ಧಾರವಾಗಿಲ್ಲ. ಅವರು ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ತೀರ್ಮಾನ ಮಾಡಿಲ್ಲ. ನಾವು ಮಂಡ್ಯದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆ, ಬೇಡವೇ ಎಂಬುದನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸುಮಲತಾ ಬಗ್ಗೆ ರೇವಣ್ಣ ಆಡಿರುವ ಮಾತು ಯಾರೊಬ್ಬರು ಸಹಿಸಲು ಸಾಧ್ಯವಿಲ್ಲ. ಹೆಣ್ಣುಮಕ್ಕಳು ರಾಜಕಾರಣಕ್ಕೆ ಬರುವುದೇ ತಪ್ಪು ಎನ್ನುವುದಾದರೆ ಇದೇ ಮಾತು ನಿಮ್ಮ ಕುಟುಂಬಕ್ಕೂ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದರು.
ತಕ್ಷಣವೇ ರೇವಣ್ಣ ಸುಮಲತಾ ಅವರಲ್ಲಿ ಕ್ಷಮೆ ಕೇಳಬೇಕು. ನಾನು ಮಾಡಿದ್ದೇ ಸರಿ ಎಂದು ಮೊಂಡುವಾದ ಮಾಡುವುದು ಸರಿಯಲ್ಲ. ರಾಜಕಾರಣವನ್ನು ರಾಜಕೀಯವಾಗಿ ಎದುರಿಸಬೇಕೆ ವಿನಃ ವೈಯಕ್ತಿಕ ನಿಂದನೆ ಮಾಡಿ ಆತ್ಮಸ್ಥೈರ್ಯವನ್ನು ಕುಗ್ಗಿಸುವಂತಹ ನೀಚ ಕೃತ್ಯಕ್ಕೆ ಕೈ ಹಾಕಬಾರದು ಎಂದರು.
ಗಂಡ ಸತ್ತ ಹೆಣ್ಣುಮಕ್ಕಳು ಮನೆಯಿಂದ ಆಚೆ ಬರಲೇಬಾರದು ಎಂಬ ನಿಯಮವಿಲ್ಲ. ನೀವು ಅಂಬರೀಶ್ ನಿಧನರಾದಾಗ ತೋರಿದ ಪ್ರೀತಿ, ವಿಶ್ವಾಸ ಎಲ್ಲವೂ ಮೊಸಳೆ ಕಣ್ಣೀರೇ? ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅನುಕಂಪ ತೋರಿಸಿದ್ದು ಚುನಾವಣಾ ಲಾಭಕ್ಕಾಗಿಯೇ ಎಂದು ಪ್ರಶ್ನಿಸಿದರು.