ಬೆಂಗಳೂರು,ಮಾ.9-ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಾವು ರಂಗೇರುತ್ತಿದ್ದು, ಎಲ್ಲಾ ಪಕ್ಷಗಳಿಗೆ ಅಭ್ಯರ್ಥಿಗಳ ಆಯ್ಕೆ ತಲೆನೋವಾಗಿ ಪರಿಣಮಿಸಿರುವ ನಡುವೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಇದೀಗ ಹೈಕಮಾಂಡ್ ಅಂಗಳ ತಲುಪಿದೆ.
ಲೋಕಸಮರಕ್ಕೆ ಧುಮುಕಲಿರುವ ಅಭ್ಯರ್ಥಿಗಳ ಪಟ್ಟಿ ಹಿಡಿದು ದೆಹಲಿಗೆ ತೆರಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಇದೀಗ ವರಿಷ್ಠರ ಮುಂದೆ ನಿಂತಿದ್ದಾರೆ. ಬಿಜೆಪಿ ಈಗಾಗಲೇ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡಿದೆ. ಎಲ್ಲಾ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಘೋಷಣೆ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬಾಕಿ ಉಳಿದಿರುವ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ದೆಹಲಿ ನಾಯಕರಿಗೆ ಸಲ್ಲಿಕೆ ಮಾಡಿದ್ದಾರೆ.
15 ಸಂಸದರು ಮತ್ತು ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ಗೆ ಟಿಕೆಟ್ ನೀಡಬೇಕೆಂಬುದರ ಜೊತೆಗೆ 12 ಕ್ಷೇತ್ರಗಳ ಆಕಾಂಕ್ಷಿಗಳ ಪಟ್ಟಿಯನ್ನು ಲಿಖಿತ ವಿವರಣೆಯೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಸಲ್ಲಿಸಿದ್ದಾರೆ.
ಬಿಜೆಪಿಯ ಟಾರ್ಗೆಟ್ 22 ರೀಚ್ ಆಗಬೇಕು ಎಂದರೆ ಹಾಲಿ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಜೊತೆಗೆ ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳನ್ನೂ ಗಂಭೀರವಾಗಿ ಪರಿಗಣಿಸಬೇಕು. ಈ ಕಾರಣ ಮುಂದಿಟ್ಟು ಯಾವ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಹೆಚ್ಚು ಲಾಭವಾಗಲಿದೆ, ಯಾವ ಅಭ್ಯರ್ಥಿಗೆ ಯಾವ ಕಾರಣಕ್ಕೆ ಟಿಕೆಟ್ ನೀಡಬೇಕು, ಬಂಡಾಯವೆದ್ದರೆ ಯಾರಿಂದ ಕಡಿಮೆ ಹಾನಿ ಇತ್ಯಾದಿಗಳ ಸಮಗ್ರ ಮಾಹಿತಿಯನ್ನು ಲಿಖಿತವಾಗಿ ಅಮಿತ್ ಶಾಗೆ ತಿಳಿಸಿದ್ದಾರೆ.
ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಆಕಾಂಕ್ಷಿಗಳ ವರ್ಚಸ್ಸು, ಜನಪ್ರಿಯತೆ, ಸಂಘಟನಾ ಸಾಮರ್ಥ್ಯ, ಪಕ್ಷದ ಆಂತರಿಕ ಸಮೀಕ್ಷೆ, ವಿವರ ಹಾಗೂ ಸ್ಥಳೀಯ ನಾಯಕರ ಅಭಿಪ್ರಾಯ ಎಲ್ಲವನ್ನೂ ಸೇರಿಸಿ ಸಮಗ್ರ ವರದಿಯೊಂದಿಗೆ ಟಿಕೆಟ್ ಪಟ್ಟಿಯನ್ನು ಹೈಕಮಾಂಡ್ಗೆ ಸಲ್ಲಿಕೆ ಮಾಡಿದ್ದಾರೆ.
ಬಿಜೆಪಿಯ ಸಂಸದೀಯ ಮಂಡಳಿ ಸಭೆಯಲ್ಲಿ ಸಾಕಷ್ಟು ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಸ್ಪರ್ಧಿಗಳ ವಯೋಮಿತಿ, ಆಯ್ಕೆ ಮಾನದಂಡದ ಕುರಿತು ನಿರ್ಧಾರ ಕೈಗೊಂಡಿದ್ದು, ಅದರ ಆಧಾರದಲ್ಲಿ ಯಡಿಯೂರಪ್ಪ ನೀಡಿರುವ ಪಟ್ಟಿಯನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ.
ಪಕ್ಷದ ಉನ್ನತ ಮೂಲಗಳ ಪ್ರಕಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಹೆಚ್ಚಿನ ಜವಾಬ್ದಾರಿಯನ್ನು ಪಕ್ಷ ವಹಿಸಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹೆಚ್ಚಿನ ಮನ್ನಣೆ ನೀಡಿ ಹುರಿಯಾಳುಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ವಹಿಸಲಾಗುತ್ತದೆ.
ಸದ್ಯದಲ್ಲೇ ಲೋಕಸಭಾ ಚುನಾವಣಾ ದಿನಾಂಕ ಪ್ರಕಟಗೊಳ್ಳಲಿದ್ದು, ದಿನಾಂಕ ಘೋಷಣೆಯಾದ ಮೂರ್ನಾಲ್ಕು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಏಕಕಾಲಕ್ಕೆ ಎಲ್ಲಾ 28 ಕ್ಷೇತ್ರಗಳ ಅಭ್ಯರ್ಥಿಗಳ ಒಂದೇ ಪಟ್ಟಿಯನ್ನು ಬಿಡುಗಡೆಗೊಳಿಸುವ ಮೂಲಕ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲಿದೆ. ಆನಂತರ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ.