ಶ್ರೀನಗರ: ರಜೆಯ ಮೇಲೆ ಜಮ್ಮು ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿರುವ ತನ್ನೂರಿಗೆ ಬಂದಿದ್ದ ಭಾರತೀಯ ಯೋಧರೊಬ್ಬರನ್ನು ಉಗ್ರರು ಅಪಹರಿಸಿದ್ದಾರೆ.
ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಉಗ್ರರಿಂದ ಅಪಹರಿಸಲ್ಪಟ್ಟಿರುವ ಯೋಧ ಮೊಹಮ್ಮದ್ ಯಾಸೀನ್ ಭಟ್ ಜಮ್ಮು ಕಾಶ್ಮೀರದ ಲೈಟ್ ಇನ್‍ಫ್ಯಾಂಟ್ರಿಗೆ ನೇಮಕವಾಗಿದ್ದರು. ನಿನ್ನೆ ಸಂಜೆ ಕೆಲವು ಉಗ್ರರು ಯಾಸೀನ್ ಅವರ ಮನೆಯೊಳಗೆ ನುಗ್ಗಿದ್ದು, ಬಲವಂತವಾಗಿ ಕಾಡಿನೊಳಕ್ಕೆ ಎಳೆದೊಯ್ದಿದ್ದಾರೆ.
ಒಂದು ತಿಂಗಳ ರಜೆಯ ಮೇಲೆ ಫೆ. 26ರಂದು ಯಾಸೀನ್ ಊರಿಗೆ ಬಂದಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಮತ್ತು ಸೇನಾಪಡೆಯ ಸಿಬ್ಬಂದಿ ಯಾಸೀನ್ ಅವರ ಮನೆಗೆ ತೆರಳಿ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ತಪಾಸಣೆ ನಡೆಸಿದ್ದಾರೆ.
ಪುಲ್ವಾಮಾ ದಾಳಿ ನಡೆದ ನಂತರ ಭಾರತದ ಗಡಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಕಾಶ್ಮೀರದ ಗಡಿ ಭಾಗದಲ್ಲೂ ಹೆಚ್ಚಿನ ಬಂದೋಬಸ್ತ್ ವಹಿಸಲಾಗಿದೆ.
ಯಾಸೀನ್ ಅವರ ಅಪಹರಣ ಹಳೆಯ ನೆನಪನ್ನು ಮರುಕಳಿಸುವಂತೆ ಮಾಡಿದ್ದು, 2017ರಲ್ಲಿ ತನ್ನ ತಂಗಿಯ ಮದುವೆಗೆಂದು ರಜೆಯ ಮೇಲೆ ಕಾಶ್ಮೀರದ ತನ್ನ ಮನೆಗೆ ತೆರಳಿದ್ದ 22 ವರ್ಷದ ಉಮ್ಮರ್ ಫಯಾಜ್ ಎಂಬ ಯೋಧನ ಮನೆಯೊಳಗೆ ನುಗ್ಗಿದ್ದ ಉಗ್ರರು ಅಪಹರಿಸಿ ಹತ್ಯೆಗೈದಿದ್ದರು.
ಇದೇರೀತಿ, ದಕ್ಷಿಣ ಕಾಶ್ಮೀರದ ಸೋಫಿಯಾನ್ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಔರಂಗಜೇಬ್ ಅವರನ್ನು ಕಳೆದ ವರ್ಷ ಜೂನ್ನಲ್ಲಿ ಉಗ್ರರು ಅಪಹರಿಸಿದ್ದರು. ಗುಂಡಿನ ದಾಳಿಯಿಂದ ಛಿದ್ರವಾಗಿದ್ದ ಔರಂಗಜೇಬ್ ಮೃತಶರೀರ ಆತನ ಮನೆಯಿಂದ 10 ಕಿ.ಮೀ. ದೂರದಲ್ಲಿ ಪತ್ತೆಯಾಗಿತ್ತು.
ಈದ್ ಹಬ್ಬದ ಆಚರಣೆಗೆ ಮನೆಗೆ ತೆರಳಿದ್ದ ಯೋಧ ಔರಂಗಜೇಬ್ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್ನನ್ನು ಹತ್ಯೆಗೈದಿದ್ದ. ಹೀಗಾಗಿ, ಉಗ್ರರು ಅವರನ್ನು ಅಪಹರಣ ಮಾಡಿದ್ದರು. ಅದಾದ ನಂತರ ಇಬ್ಬರು ಪೊಲೀಸರು ಮತ್ತು ಸಿಆರ್ಪಿಎಫ್ ಯೋಧನನ್ನು ಕೂಡ ಮನೆಯಿಂದ ಅಪಹರಿಸಲಾಗಿತ್ತು.