ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರ ಉಗ್ರರ ನಿಗ್ರಹ ವಿಚಾರದಲ್ಲಿ ಹೊಸ ಕಾರ್ಯತಂತ್ರದೊಂದಿಗೆ ನಡೆದುಕೊಳ್ಳಲಿ: ರವೀಶ್​ ಕುಮಾರ್

ನವದೆಹಲಿ: ಇಮ್ರಾನ್​ ಖಾನ್​ ನೇತೃತ್ವದ ಪಾಕಿಸ್ತಾನ ಭಯೋತ್ಪಾದನೆ ನಿಗ್ರಹದ ವಿಚಾರದಲ್ಲಿ ಹೊಸ ಕಾರ್ಯತಂತ್ರಗಳೊಂದಿಗೆ ನಡೆದುಕೊಳ್ಳಲಿ ಎಂದು ಭಾರತ ಒತ್ತಾಯಿಸಿದೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಭಾರತೀಯ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್​ ಕುಮಾರ್​, ” ಪಾಕಿಸ್ತಾನ ತನ್ನನ್ನು ಹೊಸ ಪಾಕಿಸ್ತಾನ, ಹೊಸ ರೀತಿಯ ಕಾರ್ಯತಂತ್ರಗಳ ಅಡಿಯಲ್ಲಿ ನಡೆಯುತ್ತಿದೆ ಎಂದು ಹೇಳಿಕೊಳ್ಳುತ್ತದೆ. ಹಾಗಿದ್ದರೆ, ಭಯೋತ್ಪಾದನೆ ನಿಗ್ರಹದ ವಿಚಾರದಲ್ಲಿ ಅದು ಹೊಸ ರೀತಿಯಲ್ಲಿ ನಡೆದುಕೊಳ್ಳಲಿ ಎಂದರು.

ಭಾರತೀಯ ವಾಯುಸೇನೆಯ ದಾಳಿಯಿಂದ ಭಾರತ ತನ್ನ ಗುರಿಯನ್ನು ತಲುಪಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುವ ದೃಢ ನಿರ್ಧಾರವನ್ನು ದೇಶ ತೆಗೆದುಕೊಂಡಿದೆ ಎಂದು ಹೇಳಿದರು.

ಭಾರತೀಯ ವಿಮಾನ ಮಿಗ್ -21 ಪಾಕಿಸ್ತಾನದ ಯುದ್ಧ ವಿಮಾನ ಎಫ್-16ನ್ನು ಹೊಡೆದುರುಳಿಸಿದ್ದು ಅದರ ಸಾರಥ್ಯವನ್ನು ಅಭಿನವ್ ವರ್ಥಮಾನ್ ವಹಿಸಿದ್ದರು. ಭಾರತೀಯ ವಾಯುಪಡೆಯ ದಾಳಿಗೆ ಪ್ರತ್ಯಕ್ಷದರ್ಶಿಗಳು ಮತ್ತು ವಿದ್ಯುನ್ಮಾನ ಸಾಕ್ಷಿಗಳಿವೆ ಎಂದರು.

ಅಮ್ರಾಮ್ ಕ್ಷಿಪಣಿಯ ಭಾಗದ ರೂಪದಲ್ಲಿ ನಾವು ವಾಯುಪಡೆಯ ದಾಳಿಯ ಸಾಕ್ಷಿಗಳನ್ನು ಬಹಿರಂಗಪಡಿಸಿದ್ದು ಅದು ದಾಳಿ ನಡೆದ ಸ್ಥಳದಿಂದಲೇ ವಶಪಡಿಸಿಕೊಳ್ಳಲಾಗಿದೆ, ಅದನ್ನು ನಡೆಸಿದ್ದು ಪಾಕಿಸ್ತಾನ ವಾಯುಪಡೆಯ ಎಫ್-16 ವಿಮಾನ ಎಂದು ಹೇಳಿದರು.

ಭಾರತದಿಂದ ಕೇವಲ ಒಂದು ಯುದ್ಧ ವಿಮಾನ ನಾಶವಾಗಿದೆ. ಭಾರತದ ಎರಡನೇ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳುವ ಪಾಕಿಸ್ತಾನದ ಬಳಿ ದಾಖಲೆಗಳಿದ್ದರೆ ಅದು ಬಹಿರಂಗಪಡಿಸಿಲ್ಲವೇಕೆ ಎಂದು ಕೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ