ಬೆಂಗಳೂರು,ಮಾ.9- ಲೋಕಸಭೆ ಚುನಾವಣೆಗೂ ಮುನ್ನವೇ ದೋಸ್ತಿ ಸರ್ಕಾರಕ್ಕೆ ಮತ್ತೊಂದು ಶಾಕ್ ನೀಡಲು ಮುಂದಾಗಿರುವ ಬಿಜೆಪಿ ಕಾಂಗ್ರೆಸ್ನ ಅತೃಪ್ತ ಶಾಸಕರನ್ನು ಸೆಳೆಯಲು ಮುಂದಾಗಿದೆ.
ಶಾಸಕ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟ್ಟಳಿ ಅವರನ್ನು ಇಂದು 7 ಕ್ವಾಟ್ರರ್ಸ್ ನಿವಾಸದಲ್ಲಿ ದೇವದುರ್ಗ ಶಾಸಕ ಶಿವನಗೌಡ ನಾಯಕ್ ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ನಿನ್ನೆಯಷ್ಟೇ ವಿಧಾನಸಭೆ ಸ್ಪೀಕರ್ ರಮೇಶ್ಕುಮಾರ್ ಅವರು ಕಾಂಗ್ರೆಸ್ನ ಭಿನ್ನಮತಿಯ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟ್ಟಳಿ, ಬಿ.ನಾಗೇಂದ್ರ ಹಾಗೂ ಇತ್ತೀಚೆಗಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಡಾ.ಉಮೇಶ್ ಜಾಧವ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.
ಮಂಗಳವಾರ ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದಲ್ಲಿರುವ ತಮ್ಮ ಕಚೇರಿಗೆ ಬಂದು ಭೇಟಿಯಾಗಬೇಕೆಂದು ಸೂಚನೆ ನೀಡಲಾಗಿತ್ತು. ಈ ಬೆನ್ನಲ್ಲೇ ಇಂದು ಅತೃಪ್ತ ಶಾಸಕರ ಜೊತೆ ಶಿವನಗೌಡ ನಾಯಕ್ ಭೇಟಿಯಾಗಿ ಮಾತುಕತೆ ನಡೆಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಮೂಲಗಳ ಪ್ರಕಾರ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರ ಸೂಚನೆ ಮೇರೆಗೆ ಶಿವನಗೌಡ ನಾಯಕ್ ಈ ಇಬ್ಬರು ಶಾಸಕರ ಜೊತೆ ಮಾತುಕತೆ ನಡೆಸಿ ಬಿಜೆಪಿಗೆ ಬರುವಂತೆ ಮನವೊಲಿಸಿದ್ದಾರೆ ಎಂದು ಹೇಳಲಾಗಿದೆ.
ತಾವು ಬಿಜೆಪಿಗೆ ಸೇರುವುದಾದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ರಮೇಶ್ ಜಾರಕಿಹೊಳಿ ಬೇಡಿಕೆ ಮುಂದಿಟ್ಟಿದ್ದಾರೆ ಅಲ್ಲದೆ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗರೇಂದ್ರ ಇಲ್ಲವೇ ಅವರ ಸಹೋದರರಿಗೆ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂಬ ಭರವಸೆಯನ್ನು ಕೊಟ್ಟಿದ್ದಾರೆ.
ಚಿಕ್ಕೋಡಿ ಬದಲಿಗೆ ಬಳ್ಳಾರಿಯಿಂದ ರಮೇಶ್ ಜಾರಕಿಹೊಳಿ ಸಹೋದರ ಲಕನ್ ಜಾರಕಿಹೊಳಿಗೆ ಟಿಕೆಟ್ ನೀಡಲು ಯಾವುದೇ ಸಮಸ್ಯೆಯಿಲ್ಲ. ಚಿಕ್ಕೋಡಿಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಆಕಾಂಕ್ಷಿಗಳಾಗಿರುವುದರಿಂದ ಟಿಕೆಟ್ ನೀಡುವ ಬಗ್ಗೆ ವರಿಷ್ಠರ ಜೊತೆ ಯಡಿಯೂರಪ್ಪನವರು ಚರ್ಚೆ ನಡೆಸಿದ್ದಾರೆ. ಮೊದಲು ಪಕ್ಷಕ್ಕೆ ಬನ್ನಿ ಶಿವನಗೌಡ ನಾಯಕ್ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.
ಮಂಗಳವಾರ ಸ್ಪೀಕರ್ ನೀಡಿರುವ ನೋಟಿಸ್ಗೆ ಉತ್ತರ ನೀಡಲಿದ್ದೇವೆ. ಉಮೇಶ್ ಜಾಧವ್ ನೀಡಿರುವ ರಾಜೀನಾಮೆ ಪತ್ರವನ್ನು ಅಂಗೀಕರಿಸಿದರೆ ಈ ವಾರದ ಅಂತ್ಯದೊಳಗೆ ನಾವು ಕೂಡ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ಕೊಟ್ಟಿದ್ದಾರೆ.