ವಾಷಿಂಗ್ಟನ್: ತೆರಿಗೆ ಹಾಗೂ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಚುನಾವಣಾ ಪ್ರಚಾರ ಮುಖ್ಯಸ್ಥ ಪೌಲ್ ಮನಫೋರ್ಟ್ಗೆ ನ್ಯಾಯಾಲಯ 47 ತಿಂಗಳು (ಸುಮಾರು 4 ವರ್ಷ) ಜೈಲು ಶಿಕ್ಷೆ ವಿಧಿಸಿದೆ.
ತೆರಿಗೆ ವಂಚನೆ ಹಾಗೂ ಬ್ಯಾಂಕ್ ಅಕ್ರಮ ಪ್ರಕರಣದಲ್ಲಿ ಪೌಲ್ ಹೆಸರು ಕೇಳಿ ಬಂದಿತ್ತು. ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು ಕೋರ್ಟ್ಗೆ ಸಾಕ್ಷಿಗಳನ್ನು ಒದಗಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 47 ತಿಂಗಳ ಜೈಲು ಶಿಕ್ಷೆ ನೀಡಿದೆ.
ಕಳೆದ ಜೂನ್ ತಿಂಗಳಿಂದ ಪೌಲ್ ಜೈಲಿನಲ್ಲಿದ್ದಾರೆ. 9 ತಿಂಗಳು ಈಗಾಗಲೇ ಅವರು ಜೈಲಿನಲ್ಲಿ ಕಳೆದಿರುವುದರಿಂದ ಇನ್ನು, 38 ತಿಂಗಳು ಶಿಕ್ಷೆ ಅನುಭವಿಸಿದರೆ ಸಾಕು. ಆದರೆ, ಕೊಲಂಬಿಯಾ ಜಿಲ್ಲಾ ನ್ಯಾಯಾಲಯದಲ್ಲಿ ಇವರ ಮೇಲಿರುವ ಮತ್ತೊಂದು ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಅವರ ಆರೋಪ ಸಾಬೀತಾಗಿದ್ದು, ಶೀಘ್ರದಲ್ಲೇ ಶಿಕ್ಷೆ ಪ್ರಕಟಗೊಳ್ಳಲಿದೆ. ಹಾಗಾಗಿ ಶಿಕ್ಷೆಯ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ.
ಕೋಟ್ಯಾಂತರ ರೂಪಾಯಿ ಹಣವನ್ನು ಮುಚ್ಚಿಡಲು ಪೌಲ್ ವಿದೇಶಿ ಬ್ಯಾಂಕ್ಗಳನ್ನು ಬಳಕೆ ಮಾಡಿಕೊಂಡಿದ್ದ ಎನ್ನುವ ಆರೋಪ ಅವರ ವಿರುದ್ಧ ಕೇಳಿ ಬಂದಿತ್ತು. 2016ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಕಾರ್ಯದ ಮುಖ್ಯಸ್ಥನಾಗಿ ಇವರು ನೇಮಕ ಗೊಂಡಿದ್ದರು.