ಬೆಂಗಳೂರು,ಮಾ.7-ಮುಂದಿನ ವಾರ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಹುತೇಕ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ನಾಳೆ ದೆಹಲಿಗೆ ತೆರಳಲಿರುವ ರಾಜ್ಯಾಧ್ಯಕ್ಷ ಯಡಿಯೂರಪ್ಪ ವರಿಷ್ಠರ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಸಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ನೀಡಲಿದ್ದಾರೆ.
ಹಾಲಿ 15 ಅಭ್ಯರ್ಥಿಗಳು ಸೇರಿದಂತೆ ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರಗಳಿಗೆ ಮೂರು ಅಭ್ಯರ್ಥಿಗಳ ಹೆಸರನ್ನು ಶಿಫಾರಸ್ಸು ಮಾಡಲಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಬಿಡುಗಡೆ ಮಾಡುವ ಪಟ್ಟಿಗೆ ಎಲ್ಲರೂ ಬದ್ಧರಾಗಿರಲು ಸೂಚಿಸಲಾಗಿದೆ.
ಲೋಕಸಭೆ ಚುನಾವಣೆ ಸಂಬಂಧ ಪಕ್ಷ ಕೈಗೊಂಡಿರುವ ಪೂರ್ವ ಸಿದ್ದತೆಗಳು, ಚುನಾವಣಾ ತಯಾರಿ, ಅಭ್ಯರ್ಥಿಗಳ ಪಟ್ಟಿ ಸೇರಿದಂತೆ ಚುನಾವಣೆಗೆ ಯಾವ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಯಡಿಯೂರಪ್ಪ ವರಿಷ್ಟರಿಗೆ ವಿವರಿಸಲಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರನ್ನು ಯಡಿಯೂರಪ್ಪ ಭೇಟಿಯಾಗಿ ಚುನಾವಣೆಗೆ ಕೈಗೊಂಡಿರುವ ಸಿದ್ಧತೆಗಳು,ಮೋದಿ ವಿಜಯಸಂಕಲ್ಪ ಯಾತ್ರೆ, ಶಕ್ತಿಕೇಂದ್ರ ಸಮಾವೇಶದ ಬಗ್ಗೆಯೂ ವಿವರ ನೀಡುವರು.
ಈಗಾಗಲೇ ಎಲ್ಲ ಘಟಕದಿಂದ ಕೇಂದ್ರ ನಾಯಕರು ಆಕಾಂಕ್ಷಿಗಳ ಪಟ್ಟಿಯನ್ನು ತರಿಸಿಕೊಂಡಿದ್ದಾರೆ. ಸುಮಾರು 7 ಖಾಸಗಿ ಏಜೆನ್ಸಿಗಳಿಂದ ನಡೆಸಿರುವ ಸಮೀಕ್ಷೆ, ಕೇಂದ್ರ ಗುಪ್ತಚರ ವಿಭಾಗ ನೀಡಿರುವ ವರದಿ ಆಧಾರದ ಮೇಲೆಯೇ ಅಭ್ಯರ್ಥಿ ಆಯ್ಕೆ ನಡೆಯಲಿದೆ. ಅಲ್ಲದೆ ಇದರ ಜೊತೆಗೆ ನಮೋ ಅಪ್ಲಿಕೇಷನ್ ಬಿಡುಗಡೆ ಕಾರ್ಯಕ್ರಮವು ನಡೆಯಲಿದೆ.
ರಾಜ್ಯ ಘಟಕದಿಂದ ಸಿದ್ದಪಡಿಸಿರುವ ಪಟ್ಟಿಯನ್ನು ಯಡಿಯೂರಪ್ಪ ಕೊಂಡೊಯ್ಯಲಿದ್ದು, ಸಾಮಾಜಿಕ ಸಂರಚನೆ, ಪ್ರದೇಶವಾರು, ಜಾತಿ, ಅನುಭವ, ಗೆಲ್ಲುವ ಮಾನದಂಡ ಇತ್ಯಾದಿ ಅಂಶಗಳನ್ನು ಇಟ್ಟುಕೊಂಡೇ ವರಿಷ್ಠರಿಗೆ ಪಟ್ಟಿಯನ್ನು ನೀಡಲಿದ್ದಾರೆ.
ಮೂಲಗಳ ಪ್ರಕಾರ ಹಾಲಿ ಇರುವ 15 ಲೋಕಸಭಾ ಕ್ಷೇತ್ರಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳು ಕ್ಷೀಣಿಸಿವೆ. ಉಡುಪಿ, ಚಿಕ್ಕಮಗಳೂರು ಹೊರತುಪಡಿಸಿದರೆ ಬಹುತೇಕ ಹಾಲಿ ಅಭ್ಯರ್ಥಿಗಳೇ ಮತ್ತೆ ಕಣಕ್ಕಿಳಿಯುವುದು ಖಚಿತ ಎನ್ನಲಾಗುತ್ತಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಟಿಕೆಟ್ಗಾಗಿ ಆಕಾಂಕ್ಷಿಗಳು ಲಾಬಿ ನಡೆಸಲು ಮುಂದಾಗಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಕನಿಷ್ಠ ಮೂವರು ಆಕಾಂಕ್ಷಿಗಳಿಂದ ಲಾಬಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗುವುದು ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ರವಾನಿಸಿದೆ. ಕಾಂಗ್ರೆಸ್ನಿಂದ ಹೊರಬಂದಿರುವ ಉಮೇಶ್ ಜಾಧವ್ ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ರಾಜ್ಯದ 12 ಕ್ಷೇತ್ರಗಳ ಟಿಕೆಟ್ಗಾಗಿ ಭಾರೀ ಪೈಪೋಟಿ ನಡೆದಿದೆ.
ಯಾವ ಕ್ಷೇತ್ರಕ್ಕೆ ಯಾರು ಲಾಬಿ
1. ಚಿಕ್ಕೋಡಿ ರಮೇಶ್ ಕತ್ತಿ ಮತ್ತು ಪ್ರಭಾಕರ್ ಕೋರೆ
2. ಕಲ್ಬುರ್ಗಿ ಡಾ.ಉಮೇಶ್ ಜಾಧವ್ ಸಾಧ್ಯತೆ
3. ರಾಯಚೂರು ಮಾಜಿ ಸಂಸದ ಸಣ್ಣ ಫಕೀರಪ್ಪ
4. ಬಳ್ಳಾರಿ ಜೆ. ಶಾಂತಾ, ಸುರೇಶ್ ಬಾಬು, ವೆಂಕಟೇಶ್ ಪ್ರಸಾದ್ (ಶಾಸಕ ಬಿ. ನಾಗೇಂದ್ರ ಸಹೋದರ)
5. ಚಿತ್ರದುರ್ಗ ಮಾಜಿ ಸಂಸದ ಜೆ. ಜನಾರ್ದನ ಸ್ವಾಮಿ
6. ತುಮಕೂರು ಮಾಜಿ ಶಾಸಕ ಸುರೇಶ್ ಗೌಡ, ಮಾಜಿ ಸಂಸದ ಜಿ.ಎಸ್. ಬಸವರಾಜು
7. ಮಂಡ್ಯ, ಹಾಸನ ಕಾದು ನೋಡುವ ತಂತ್ರ
8. ಚಾಮರಾಜನಗರ ಎಂ.ಶಿವಣ್ಣ, ಎ.ಆರ್. ಕೃಷ್ಣಮೂರ್ತಿ
9. ಬೆಂಗಳೂರು ಗ್ರಾಮಾಂತರ ಮಾಜಿ ಎಂಎಲ್ ಸಿ ಅಶ್ವಥ್ ನಾರಾಯಣ್, ರುದ್ರೇಶ್
10. ಬೆಂಗಳೂರು ದಕ್ಷಿಣ ಡಾ.ತೇಜಸ್ವಿನಿ ಅನಂತಕುಮಾರ್ ಸಾಧ್ಯತೆ
11. ಚಿಕ್ಕಬಳ್ಳಾಪುರ ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ, ಶರತ್ ಬಚ್ಚೇಗೌಡ
12. ಕೋಲಾರ -ಡಿ.ಎಸ್. ವೀರಯ್ಯ, ಎಂ ನಾರಾಯಣಸ್ವಾಮಿ, ಚಿ.ನಾ.ರಾಮು, ಚಲವಾದಿ ನಾರಾಯಣಸ್ವಾಮಿ