ಬೆಂಗಳೂರು,ಮಾ.8- ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿಯಾದರೂ ನ್ಯಾಯಾಲಯಕ್ಕೆ ಹಾಜರಾಗದಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಇಂದು ನ್ಯಾಯಾಲಯ ತನ್ನ ಕಸ್ಟಡಿಗೆ ಪಡೆದು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ವಾರಂಟ್ ರಿಕಾಲ್‍ಗೆ ಹಾಜರಾಗಿದ್ದ ಪ್ರತಾಪ್ ಸಿಂಹ ಅವರನ್ನು ನ್ಯಾಯಾಲಯ ತನ್ನ ಕಸ್ಟಡಿಗೆ ಪಡೆದುಕೊಂಡಿದೆ.
ಟ್ವಿಟ್ಟರ್ ಮೂಲಕ ನಟ ಪ್ರಕಾಶ್ ರೈ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪದ ಮೇರೆಗೆ ಸಂಸದ ಪ್ರತಾಪ್ ಸಿಂಹರ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರೈ ಮಾನನಷ್ಟ ಪ್ರಕರಣ ದಾಖಲಿಸಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‍ಗೆ ಹಾಜರಾಗುವಂತೆ ಅನೇಕ ಬಾರಿ ಕೋರ್ಟ್ ಸಮನ್ಸ್‍ಗಳನ್ನು ಜಾರಿಗೊಳಿಸಲಾಗಿತ್ತು. ಕೋರ್ಟ್ ಆದೇಶವಿದ್ದರೂ ಪ್ರತಾಪ್ ಸಿಂಹ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ಇಂದು ಕೋರ್ಟ್‍ಗೆ ಹಾಜರಾದ ಪ್ರತಾಪ್ ಸಿಂಹ ಅವರನ್ನು ಕಸ್ಟಡಿಗೆ ಪಡೆದ ನ್ಯಾಯಾಲಯ, ಅವರಿಗೆ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ.