ಲಖನೌ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಚುರುಕು ಪಡೆದುಕೊಂಡಿದ್ದು, ಉತ್ತರ ಪ್ರದೇಶದ ಲೋಕಸಭಾ ಕ್ಷೇತ್ರಗಳಿಗೆ ಸಮಾಜವಾದಿ ಪಕ್ಷ ಕೂಡ ಅಭ್ಯರ್ಥಿಗಳನ್ನು ಘೋಷಿಸಿದ್ದು, ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ.
ಉತ್ತರ ಪ್ರದೇಶದ 11 ಲೋಕಸಭೆ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದ ಬೆನ್ನಲ್ಲೇ ಸಮಾಜವಾದಿ ಪಕ್ಷ ಕೂಡ ಅಭ್ಯರ್ಥಿಗಳನ್ನು ಘೋಷಿಸಿದೆ. ಎಸ್ ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರು ಮೈನ್ಪುರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಎಸ್ಪಿ ಪ್ರಕಟಿಸಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪ್ರಮುಖವಾಗಿ ಕುಟುಂಬಸ್ಥರಿಗೆ ಆದ್ಯತೆ ಸಿಕ್ಕಿದೆ. ಮುಲಾಯಂ ಸೋದರಳಿಯ ಧರ್ಮೇಂದ್ರ ಯಾದವ್ ಅವರು ಬದೌನ್ ಕ್ಷೇತ್ರದಿಂದ , ಸೋದರ ರಾಮ್ ಗೋಪಾಲ್ ಯಾದವ್ ಪುತ್ರ ಅಕ್ಷಯ್ ಅವರು ಫಿರೋಜಾಬಾದ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಪಕ್ಷದ ಮುಖಂಡರಾದ ಕಮಲೇಶ್ ಕಟಾರಿಯಾ ಇಟಾವಾದಿಂದ, ಶಬ್ಬೀರ್ ವಾಲ್ಮೀಕಿ ಬೆಹ್ರೇಚ್ ಕ್ಷೇತ್ರದಿಂದ, ಬಾಯ್ ಲಾಲ್ ರಾಬರ್ಟ್ಸ್ಗಂಜ್ನಿಂದ ಅಭ್ಯರ್ಥಿಯಾಗಿದ್ದಾರೆ.
ಉತ್ತರಪ್ರದೇಶದ ಲೋಕಸಭೆ 80 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಇದರಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಹೆಸರೂ ಇತ್ತು.
ಉತ್ತರ ಪ್ರದೇಶದಲ್ಲಿ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿ ಮಾಡಿಕೊಂಡಿದ್ದು ಎಸ್ಪಿ 37 ಕ್ಷೇತ್ರಗಳಲ್ಲಿ ಬಿಎಸ್ಪಿ 38 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ.
Samajwadi Party releases first list of 6 candidates for Lok Sabha polls. Mulayam Singh Yadav to contest from Mainpuri