ಹೊಸದಿಲ್ಲಿ: ಮಹಿಳಾ ದಿನಾಚರಣೆ ವಿಶೇಷವಾಗಿ ಗೂಗಲ್ ಡೂಡಲ್ ವಿಭಿನ್ನ ರೀತಿಯಲ್ಲಿ ತನ್ನ ಗೌರವವನ್ನು ಸೂಚಿಸಿದೆ. ಜಗತ್ತಿನ ನಾನಾ ಭಾಗಗಳ 13 ಪ್ರಸಿದ್ಧ ಮಹಿಳೆಯರ ಸ್ಫೂರ್ತಿದಾಯಕ ಕೋಟ್ಗಳನ್ನು ಪ್ರಕಟಿಸುವ ಮೂಲಕ ಇಂದಿನ ದಿನವನ್ನು ಆಚರಿಸುತ್ತಿದೆ.
ಭಾರತದ ಮೇರಿ ಕೋಮ್ರಿಂದ ಹಿಡಿದು ಜಪಾನ್ನ ಕಲಾವಿದೆ ಮತ್ತು ಚಿತ್ರಸಾಹಿತಿ ಯೋಕೋ ಓನೋ ಅವರವರೆಗೆ ಪ್ರಸಿದ್ಧ ಮಹಿಳೆಯರ ಕೋಟ್ಗಳನ್ನು ಡೂಡಲ್ನಲ್ಲಿ ಬಳಸಲಾಗಿದೆ. ಮಹಿಳಾ ಸಬಲೀಕರಣದ ಕುರಿತಾದ ಕೋಟ್ಗಳು ಇದಾಗಿವೆ.
1909ರ ಫೆಬ್ರವರಿ 28ರಂದು ನ್ಯೂಯಾರ್ಕ್ನಲ್ಲಿ ಮೊದಲ ಬಾರಿಗೆ ಮಹಿಳಾ ದಿನವನ್ನು ಆಚರಿಸಲಾಯಿತು. ಅದಾದ 2 ವರ್ಷಗಳ ನಂತರ ಅಂತಾರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ಮಹಿಳಾ ದಿನವನ್ನು ಆಚರಿಸಬೇಕೆಂದು ಸಲಹೆ ನೀಡಲಾಯಿತು. ಆದರೆ, ಈ ದಿನವನ್ನು ಮೊದಲ ಬಾರಿಗೆ ಅಧಿಕೃತವಾಗಿ ಆಚರಿಸಿದ್ದು 1917ರ ಮಾರ್ಚ್ 8ರಂದು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಈ ಡೂಡಲ್ ಸಿದ್ಧಪಡಿಸಲು ಜಗತ್ತಿನ ಪ್ರತಿಭಾವಂತ ಮಹಿಳೆಯರ ತಂಡವನ್ನು ಕರೆಸಿ ವಿನ್ಯಾಸಗೊಳಿಸಲಾಗಿದೆ.
ಮಹಿಳೆಯಿಂದ ಮಹಿಳೆಯ ಸಬಲೀಕರಣ ಎಂಬ ಪರಿಕಲ್ಪನೆಯಲ್ಲಿ ಈ ಡೂಡಲ್ ಸಿದ್ಧಗೊಂಡಿದೆ.
11 ಭಾಷೆಯಲ್ಲಿ ಮಹಿಳೆಯನ್ನು ವ್ಯಾಖ್ಯಾನಿಸಿದ ಡೂಡಲ್:
ಗೂಗಲ್ ಡೂಡಲ್ನಲ್ಲಿ 11 ಭಾಷೆಗಳಲ್ಲಿ ಮಹಿಳೆ ಎಂಬ ಪದವನ್ನು ಬರೆಯಲಾಗಿದೆ. ಭಾರತದ ಹಿಂದಿ, ಬೆಂಗಾಲಿ ಸೇರಿದಂತೆ 11 ಭಾಷೆಗಳಲ್ಲಿ ಸ್ತ್ರೀಯನ್ನು ಉಲ್ಲೇಖಿಸಲಾಗಿದೆ. ಇದನ್ನು ಕ್ಲಿಕ್ ಮಾಡಿದರೆ ಸ್ಲೈಡ್ಗಳು ತೆರೆದುಕೊಳ್ಳಲಿವೆ. ಆ ಸ್ಲೈಡ್ಗಳಲ್ಲಿ ಭಾರತದ ಮೇರಿ ಕೋಮ್ ಮತ್ತು ಅಂಧ ಐಎಫ್ಎಸ್ ಅಧಿಕಾರಿಯಾಗಿರುವ ಬೆನೋ ಜೆಫೈನ್ ಇಬ್ಬರ ಕೋಟ್ಗಳು ಕೂಡ ಇವೆ ಎಂಬುದು ಹೆಮ್ಮೆಯ ಸಂಗತಿ.
ನೀವು ಮಹಿಳೆ ಎಂಬ ಕಾರಣಕ್ಕೆ ನೀವು ದುರ್ಬಲಳೆಂದು ಎಂದಿಗೂ ಭಾವಿಸಬೇಡಿ ಎಂದು ಭಾರತದ ಮಣಿಪುರದ ಮಹಿಳಾ ಬಾಕ್ಸರ್ ಮೇರಿ ಕೋಮ್ ಹೇಳಿರುವ ಕೋಟ್ ಡೂಡಲ್ನಲ್ಲಿದೆ. ಭಾರತದ ಮೊದಲ ಅಂಧ ಐಎಫ್ಎಸ್ ಅಧಿಕಾರಿಯಾಗಿರುವ ಚೆನ್ನೈನ ಬೆನೋ ಜೆಫೈನ್ ಅವರ ‘ನಿರಾಸೆಗಳು ನಮ್ಮ ಮನಸಿನೊಳಗೆ ಪ್ರವೇಶಿಸಲು ಸುಲಭವಾಗಿ ಅವಕಾಶ ನೀಡಬಾರದು’ ಎಂಬ ಕೋಟ್ ಅನ್ನು ಕೂಡ ಡೂಡಲ್ನಲ್ಲಿ ಬಳಸಲಾಗಿದೆ.