ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಅಯೋಧ್ಯೆ ಭೂ ವಿವಾದ ಬಗೆಹರಿಸಲು ಯತ್ನಿಸುತ್ತೇವೆ: ಸಮಿತಿ ಮುಖ್ಯಸ್ಥ ಖಲೀಫುಲ್ಲಾ

ನವದೆಹಲಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅಯೋಧ್ಯೆ ಭೂ ವಿವಾದ ಪ್ರಕರಣವನ್ನು ಸ್ನೇಹ-ಸೌಹಾರ್ಧಯುತವಾಗಿ ಪರಿಷ್ಕರಿಸುತ್ತೇವೆ ಎಂದು ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ಸಂಧಾನ ಸಮಿತಿ ಮುಖ್ಯಸ್ಥ ಖಲೀಫುಲ್ಲಾ ಹೇಳಿದ್ದಾರೆ.

ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಸಂಧಾನ ಸಮಿತಿ ನೇಮಕ ಮಾಡಿ ಸಮಿತಿ ಮೂಲಕವೇ ವಿವಾದ ಇತ್ಯರ್ಥವಾಗಬೇಕು ಎಂಬ ಮಹತ್ವದ ತೀರ್ಪು ನೀಡಿದೆ. ಅತ್ತ ಸುಪ್ರೀಂ ಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆಯೇ ಇತ್ತ ಈ ಸಂಬಂಧ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಸಂಧಾನ ಸಮಿತಿ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ಅವರು, ಸುಪ್ರೀಂ ಕೋರ್ಟ್ ತಮ್ಮನ್ನು ಸಂಧಾನ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಆದರೆ ಈ ವರೆಗೂ ತಮಗೆ ಕೋರ್ಟ್ ಆದೇಶದ ಅಧಿಕೃತ ಪ್ರತಿ ಸಿಕ್ಕಿಲ್ಲ. ಶೀಘ್ರ ಪ್ರತಿ ಪಡೆಯಲು ಪ್ರಯತ್ನಿಸುತ್ತೇನೆ.

ಕೋರ್ಟ್ ಹಾಕಿರುವ ನಿಬಂಧನೆಗೊಳಪಟ್ಟು ಸ್ನೇಹ ಮತ್ತು ಸೌಹಾರ್ಧಯುತವಾಗಿ ವಿವಾದವನ್ನು ಇತ್ಯರ್ಥಗೊಳಿಸುತ್ತೇವೆ. ಸಂಧಾನ ಪ್ರಕ್ರಿಯೆಯಲ್ಲಿ ಅಗತ್ಯ ಬಿದ್ದರೆ ಸಾಂವಿಧಾನಿಕ ಪೀಠವನ್ನೇ ಸಲಹೆ ಕೇಳಿ ಪಡೆಯುತ್ತೇವೆ ಎಂದು ಖಲೀಫುಲ್ಲಾ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ