ಲೋಕಪಾಲ ನೇಮಕಾತಿ ಹೆಸರು ಬಹಿರಂಗಕ್ಕೆ ಸುಪ್ರೀಂ ನಕಾರ; ಆಯ್ಕೆ ಸಮಿತಿ ಸಭೆ ದಿನಾಂಕ ನಿಗದಿಗೆ ಸೂಚನೆ

ನವದೆಹಲಿ: ಲೋಕಪಾಲ ನೇಮಕಾತಿಗೆ ಸೂಚಿಸಿದ ಹೆಸರುಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ವಕೀಲ ಪ್ರಶಾಂತ್‌ ಭೂಷಣ್‌ ಅವರು ಮಾಡಿದ್ದ ಮನವಿಯನ್ನು ನಿರಾಕರಿಸಿರುವ ಸುಪ್ರೀಂಕೋರ್ಟ್‌, ಲೋಕಪಾಲ್ ನೇಮಕಾತಿಗೆ ಆಯ್ಕೆ ಸಮಿತಿ ಸಭೆ ನಡೆಸಲು ದಿನಾಂಕವನ್ನು ಮುಂದಿನ 10 ದಿನಗಳೊಳಗೆ ನಿಗದಿಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಲೋಕಪಾಲ್‌ ನೇಮಕಕ್ಕೆ ಶೋಧನಾ ಸಮಿತಿಯು ಈಗಾಗಲೇ ತನ್ನ ಶಿಫಾರಸುಗಳನ್ನು ಕಳುಹಿಸಿದೆ ಎಂದು ಕೇಂದ್ರ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದು, ನ್ಯಾಯಾಲಯದ ಆದೇಶದಂತೆ ಫೆ.28 ರಂದು ಮೂವರು ಸದಸ್ಯರನ್ನೊಳಗೊಂಡ ಮೂರು ತಂಡಗಳ ಹೆಸರನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ತಿಳಿಸಿದ್ದಾರೆ.

ಅರ್ಜಿದಾರ ಪ್ರಶಾಂತ್‌ ಭೂಷಣ್‌ ಅವರು ಲೋಕಪಾಲಕ್ಕೆ ಸೂಚಿಸುವ ಹೆಸರನ್ನು ಸಾರ್ವಜನಿಕಗೊಳಿಸಬೇಕು ಎಂದ ಮನವಿಯನ್ನು ಕೋರ್ಟ್‌ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌, ನೀವು ಉತ್ತಮ ಕೆಲಸವನ್ನೇ ಮಾಡಿದ್ದೀರಿ. ಆದರೆ, ಅದಕ್ಕೆ ಮಿತಿಯೊಂದಿದೆ. ನೀವು ಇದನ್ನು ನಿಲ್ಲಿಸಿ. ಸೂಚಿತ ಹೆಸರುಗಳನ್ನು ಸಾರ್ವಜನಿಕಗೊಳಿಸುವ ಅಗತ್ಯವಿದೆ ಎಂದು ನಮಗನಿಸುತ್ತಿಲ್ಲ ಎಂದು ಹೇಳಿದ್ದಾರೆ.

ಯಾರೊಬ್ಬರನ್ನು ಗೊತ್ತುಪಡಿಸದಿರುವುದರಿಂದಾಗಿ ಲೋಕಪಾಲ್‌ ಆಯ್ಕೆ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕ ಯಾರು ಎಂದು ಮುಖ್ಯ ನ್ಯಾಯಮೂರ್ತಿ ಅವರು ವೇಣುಗೋಪಾಲ್​ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್‌, ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿ ಪಾಲಿಸಿದ ಶಿಷ್ಟಾಚಾರದಂತೆ ಏಕೈಕ ಅತಿದೊಡ್ಡ ಪಕ್ಷದ ನಾಯಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಟಾರ್ನಿ ಜನರಲ್ ನ್ಯಾಯಾಲಯಕ್ಕೆ ತಿಳಿಸಿದರು.

ಕಳೆದ ಬಾರಿ ನಡೆದ ವಿಚಾರಣೆಯಲ್ಲಿ ನ್ಯಾಯಾಲಯ ಶೋಧನಾ ಸಮಿತಿಗೆ ಲೋಕಪಾಲ ನೇಮಕಕ್ಕೆ ಆಯ್ಕೆ ಸಮಿತಿಗೆ ಹೆಸರನ್ನು ಶಿಫಾರಸು ಮಾಡುವಂತೆ ಸೂಚಿಸಿತ್ತು.

Inform Within 10 Days On Meeting To Select Lokpal: Top Court To Centre

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ