ಮಳವಳ್ಳಿ, ಮಾ.7- ಕಳೆದ 10 ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ವಕೀಲೆಯೊಬ್ಬರು ಕೊಲೆಗೀಡಾಗಿದ್ದು ಈಕೆಯ ಶವ ಕಬ್ಬಿನ ಗದ್ದೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಾಲ್ಲೂಕಿನ ಮಾದಹಳ್ಳಿಯ ಮಾದಲಾಂಬಿಕಾ (35) ಎಂಬಾಕೆಯೇ ಕೊಲೆಗೀಡಾಗಿರುವ ಮಹಿಳೆ ಈಕೆಯ ಶವ ಮಾದಹಳ್ಳಿ-ತಳಗವಾದಿ ರಸ್ತೆಯಲ್ಲಿರುವ ತಳಗವಾದಿ ಗ್ರಾಮದ ಚಂದ್ರು ಎಂಬುವರ ಕಬ್ಬಿನ ಗದ್ದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ಮಾದಲಾಂಬಿಕೆ ವಕೀಲೆಯಾಗಿದ್ದು ಈಕೆ ಮಳವಳ್ಳಿಯ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಕೀಲೆ ವೃತ್ತಿ ನಡೆಸುತ್ತಿದ್ದರು.ಕಳೆದ 12 ವರ್ಷಗಳ ಹಿಂದೆ ತಲಕಾಡು ಬಳಿಯ ಹೆಮ್ಮಿಗೆ ಗ್ರಾಮದ ಶಶಿಧರ್ ಎಂಬಾತನೊಡನೆ ವಿವಾಹವಾಗಿದ್ದ ಈಕೆಗೆ 10 ವರ್ಷದ ಒಬ್ಬಳು ಹೆಣ್ಣುಮಗಳಿದ್ದಾಳೆ.
ಮಾದಹಳ್ಳಿ ಗ್ರಾಮದಲ್ಲಿ ತನ್ನ ಪುತ್ರಿಯೊಡನೆ ನೆಲೆಸಿದ್ದ ಈಕೆ ವಕೀಲ ವೃತ್ತಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಳು.
ಕಳೆದ 25 ರಂದು ಇದ್ದಕ್ಕಿದ್ದಂತೆ ಮನೆಯಿಂದ ಕಾಣೆಯಾಗಿದ್ದ ಈಕೆಗಾಗಿ ಮೃತಳ ಅಕ್ಕ ರುದ್ರಮ್ಮ ಎಲ್ಲಾ ಕಡೆ ಹುಡುಕುತ್ತಿದ್ದರಾದರೂ ಈಕೆಯ ಸುಳಿವು ಸಿಕ್ಕಿರಲಿಲ್ಲ ಬೆಳಿಗ್ಗೆ ಚಂದ್ರು ಅವರ ಕಬ್ಬಿನ ಗದ್ದೆಯಲ್ಲಿ ಆಳುಗಳು ಕಬ್ಬನ್ನು ಕತ್ತರಿಸುತ್ತಿದ್ದಾಗ ಕಬ್ಬಿನ ಬೆಳೆ ಮಧ್ಯ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಹೋಗಿ ನೋಡಿದಾಗ ಮಾದಲಾಂಭಿಕೆ ಶವ ಪತ್ತೆಯಾಗಿದೆ. ಯಾರೋ ದುಷ್ಕರ್ಮಿಗಳು ಆಕೆಯ ವೇಲ್ನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿ ಶವವನ್ನು ಕಬ್ಬಿನ ಗದ್ದೆಯಲ್ಲಿ ಬೀಸಾಡಿ ಪರಾರಿಯಾಗಿದ್ದಾರೆ ಎಂದು ಮೃತಳ ಅಕ್ಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಠಾಣೆ ಪಿಎಸ್ಐ ಆನಂದ್ ಹಾಗೂ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ಶವದ ಮಹಜರು ನಡೆಸಿ ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಶವವನ್ನು ವಾರಸುದಾರರಿಗೆ ನೀಡಿದ್ದಾರೆ.
ಸ್ಥಳಕ್ಕೆ ಅಡಿಷನಲ್ ಎಸ್ಪಿ ಬಲರಾಮೇಗೌಡ, ಸರ್ಕಲ್ ಇನ್ಸ್ಪೆಕ್ಟರ್ ಧರ್ಮೇಂದ್ರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.