ತಾಲೂಕಿನ ಆನೇಕ ಗ್ರಾಮಗಳಲ್ಲಿ ಆನೆಗಳ ದಾಳಿ-ಬೆಳೆಗಳ ನಾಶದಿಂದ ಆತಂಕಕ್ಕೆ ಒಳಗಾಗಿರುವ ರೈತರು

ಮಳವಳ್ಳಿ, ಮಾ.7- ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನ ವಿವಿಧ ಗ್ರಾಮಗಳಿಗೆ ದಾಂಗುಡಿ ಇಡುತ್ತಿರುವ ಆನೆಗಳ ಹಿಂಡು ಭತ್ತ, ಬಾಳೆ ಮತ್ತಿತರರ ಬೆಳೆಗಳನ್ನು ನಾಶ ಪಡಿಸಿದ್ದು ರೈತರು ತೀವ್ರ ಆತಂಕಕ್ಕೆ ಇಡಾಗಿದ್ದಾರೆ.

ಮಂಚನಹಳ್ಳಿ-ದನಗೂರು ಮತ್ತಿತರ ಗ್ರಾಮದವರು ಮನೆಗಳಿಂದ ಹೊರಬರಲು ಹೆದರುತ್ತಿದ್ದಾರೆ.ಮಂಚೇನಹಳ್ಳಿಯ ರಾಜು ಅವರ ಒಂದೂವರೆ ಎಕರೆ ಬಾಳೆತೋಟ, ದನಗೂರು ಗ್ರಾಮದ ಮಂಜುನಾಥ್ ಅವರ ಒಂದು ಕಾಲು ಎಕರೆ ಭತ್ತವನ್ನು ಆನೆಗಳ ಹಿಂಡು ತಿಂದು-ತುಳಿದು ನಾಶಪಡಿಸಿವೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಮಂಚನಹಳ್ಳಿ ಗ್ರಾಮದ ಪುಟ್ಟಲಿಂಗಮ್ಮ ಅವರ ಎರಡು ಎಕರೆ ಬಾಳೆತೋಟವನ್ನು ಸಂಪೂರ್ಣ ನಾಶಪಡಿಸಿದ್ದವು.ಗ್ರಾಮಸ್ಥರ ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ ಎಂದು ನೂರಾರು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುತ್ತತ್ತಿ ಅರಣ್ಯ ಪ್ರದೇಶವನ್ನು ವನ್ಯಜೀವಿ ಧಾಮಕ್ಕೆ ಸೇರ್ಪಡೆ ಮಾಡಲಾಗಿದೆ. ಹಾಗಾಗಿ ದೂರು ನೀಡಿದರೆ ಇದಕ್ಕೂ ನಮಗೂ ಸಂಬಂಧವಿಲ್ಲ. ಅರಣ್ಯ ಇಲಾಖೆಯವರನ್ನು ಕೇಳಿ ಎನ್ನುತ್ತಾರೆ.

ಅರಣ್ಯ ಇಲಾಖೆಯವನರನ್ನು ಕೇಳಿದರೆ ವನ್ಯಜೀವಧಾಮದವರದ ಮೇಲೆ ಹೇಳುತ್ತಾರೆ ಒಟ್ಟಾರೆ ಇವರಿಬ್ಬರ ಜಗಳದಿಂದ ರೈತರು ಹೈರಾಣಾಗಿದ್ದಾರೆ.ಇನ್ನಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತು ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅನ್ನದಾನಿ ಪ್ರತಿಕ್ರಿಯೆ:
ವಿಷಯ ತಿಳಿಯುತ್ತಿದ್ದಂತೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸ್ಥಳೀಯ ಶಾಸಕ ಹಾಗೂ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಅನ್ನದಾನಿ ರೈತರು ಆತಂಕಪಡುವುದು ಬೇಡ ಆನೆಗಳ ಹಾವಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು.ಬೆಳೆ ಕಳೆದುಕೊಂಡವರಿಗೆ ಶೀಘ್ರವೇ ಪರಿಹಾರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಪದೇ ಪದೇ ಆನೆಗಳು ಗ್ರಾಮಗಳಿಗೆ ಬರುತ್ತಿರುವ ಬಗ್ಗೆ ನನಗೆ ಮಾಹಿತಿ ಇದೆ.ಮುಂದಿನ ದಿನಗಳಲ್ಲಿ ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ಸೋಲಾರ್ ಫೆನ್ಸ್‍ಂಗ್ ಅಳವಡಿಸಲಾಗುವುದು ಕಾಡಿನ ಸುತ್ತ ದೊಡ್ಡ ಹಳ್ಳಗಳನ್ನು ತೊಡಿಸಲಾಗುವುದು ಎಂದು ತಿಳಿಸಿದರು.

ಆನೆಗಳು ಮುತ್ತತ್ತಿ ಮತ್ತು ಶಿಂಷಾ ಅರಣ್ಯ ಭಾಗದಿಂದ ಗ್ರಾಮಗಳತ್ತ ಬರುತ್ತಿವೆ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸುತ್ತೇನೆ ಎಂದು ಅನ್ನದಾನಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ