ಬೆಳಗಾವಿ, ಮಾ.7- ಬೇಟಿ ಪಡಾವೋ, ಬೇಟಿ ಬಚಾವೋ ಎಂಬ ಕಾಲದಲ್ಲೂ ಇಲ್ಲೊಬ್ಬ ಭೂಪ ಗಂಡು ಮಗು ಬೇಕು ಎಂದು ತನ್ನ ಎರಡು ಹೆಣ್ಣು ಮಕ್ಕಳನ್ನು ಮನೆಯಿಂದ ಹೊರ ಹಾಕಿರುವುದಲ್ಲದೆ ಮತ್ತೊಂದು ಮದುವೆಯಾಗಿದ್ದಾನೆ..!
ತಾಲ್ಲೂಕಿನ ಕಾಕತಿ ಗ್ರಾಮದ ನಿವಾಸಿ ಬಾಳಗೌಡ ಪಾಟೀಲ್ ಗಂಡು ಮಗು ಬೇಕು ಎಂದು ಹಠಕ್ಕೆ ಬಿದ್ದು , ಬೆಳೆದು ನಿಂತಿರುವ ತನ್ನ ಎರಡು ಹೆಣ್ಣು ಮಕ್ಕಳನ್ನು ಮನೆಯಿಂದ ಹೊರ ಹಾಕಿದ್ದಾನೆ ಮಾತ್ರವಲ್ಲ ಮೂರು ಮದುವೆಯಾಗಿದ್ದಾನೆ.
ಅಪ್ಪನ ಈ ಧೋರಣೆಯಿಂದ ಬೇಸತ್ತಿರುವ ಆತನ ಇಬ್ಬರು ಹೆಣ್ಣು ಮಕ್ಕಳು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಂದೆ ಬಾಳಗೌಡ ಪಾಟೀಲ್ ಹೆತ್ತ ಮಕ್ಕಳ ಪಾಲಿಗೆ ವಿಲನ್ ಆಗಿದ್ದು, ಇದೀಗ ಇಬ್ಬರು ಹೆಣ್ಣು ಮಕ್ಕಳು ಬೀದಿ ಪಾಲಾಗಿದ್ದಾರೆ. ಈ ಇಬ್ಬರ ನೆರವಿಗೆ ಕಾಕತಿ ಗ್ರಾಮಸ್ಥರು ಆಗಮಿಸಿದ್ದು, ನ್ಯಾಯ ಕೊಡಿಸುವ ಭರವಸೆ ಕೊಟ್ಟಿದ್ದಾರೆ.
ಇಳಿ ವಯಸ್ಸಿನಲ್ಲೂ ಗಂಡು ಮಗು ಬೇಕು ಎಂದು ಹಠಕ್ಕೆ ಬಿದ್ದು ಮತ್ತೊಂದು ಮದುವೆಯಾಗಿ ಬೆಳೆದು ನಿಂತ ಇಬ್ಬರು ಹೆಣ್ಣು ಮಕ್ಕಳನ್ನು ಮನೆಯಿಂದ ಹೊರ ಹಾಕಿರುವ ಬಾಳಗೌಡ ಪಾಟೀಲ್ರಿಗೆ ತಕ್ಕ ಶಾಸ್ತ್ರಿ ಆಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.