ರಾಮ ಜನ್ಮಭೂಮಿ ಬಾಬರಿ ಮಸೀದಿ ಭೂ ವಿವಾದ-ಮಧ್ಯವರ್ತಿಗಳ ನೇಮಕ-ತೀರ್ಪನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ನವದೆಹಲಿ, ಮಾ.6- ಶತಕೋಟಿ ಭಾರತೀಯರು ಕಾತುರದಿಂದ ಎದುರು ನೋಡುತ್ತಿರುವ ವಿವಾದಾತ್ಮಕ ರಾಮ ಜನ್ಮಭೂಮಿ ಬಾಬರಿ ಮಸೀದಿ ಭೂ ವಿವಾದ ಪರಿಹಾರಕ್ಕೆ ಮಧ್ಯವರ್ತಿಗಳನ್ನು ನೇಮಿಸುವ ಸಂಬಂಧ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.

ಮಧ್ಯವರ್ತಿಗಳ ಮೂಲಕ ವಿವಾದವನ್ನು ಪರಿಹರಿಸಲು ಸಾಧ್ಯವೇ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ಪ್ರಶ್ನೆ ಮಾಡಿತು.

ಆದರೆ ಇದಕ್ಕೆ ಅರ್ಜಿದಾರರಲ್ಲೊಬ್ಬರಾದ ಹಿಂದೂ ಮಹಾಸಭಾ ತೀವ್ರ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮಧ್ಯಸ್ಥಿಕೆಯಲ್ಲೇ ಸಮಸ್ಯೆ ಇತ್ಯರ್ಥವಾಗಬೇಕು.

ಮಧ್ಯವರ್ತಿಗಳಿಂದ ಇದು ಪರಿಹಾರವಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಇನ್ನು ಮಧ್ಯವರ್ತಿಗಳ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕೆಂಬ ನ್ಯಾಯಾಲಯದ ಸಂಧಾನವನ್ನು ಕೇಂದ್ರ ಸರ್ಕಾರವು ಕೂಡ ಒಪ್ಪಲಿಲ್ಲ. ಇದು ಅತ್ಯಂತ ಸೂಕ್ಷ್ಮ ವಿಷಯವಾಗಿರುವುದರಿಂದ ಸರಳವಾಗಿ ಪರಿಹಾರವಾಗುವುದಿಲ್ಲ ಎಂಬುದನ್ನು ನ್ಯಾಯಮೂರ್ತಿಗಳ ಗಮನಕ್ಕೆ ಅಟಾರ್ನಿ ಜನರಲ್ ವೇಣುಗೋಪಾಲ್ ತಂದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ ಅವರು ಈ ಪ್ರಕರಣ ಕೇವಲ ಜಾಗಕ್ಕೆ ಸಂಬಂಧಪಟ್ಟಿದ್ದಲ್ಲ. ಎರಡು ಧರ್ಮದ ಜನರ ಭಾವನೆಯ ನಡುವಿನ ಸಮಸ್ಯೆಯೂ ಆಗಿದೆ. ಹಿಂದೆ ಏನಾಗಿತ್ತು. ಯಾವ ರಾಜ ಆಗಿದ್ದ. ಆತ ದೇವಸ್ಥಾನ ಕಟ್ಟಿಸಿದ್ದಾನೋ, ಮಸೀದಿ ಕಟ್ಟಿಸಿದ್ದಾನೋ ಎಂಬುದು ನಮಗೆ ಮುಖ್ಯವಾಗಬಾರದು.

ನಮ್ಮ ಕಣ್ಣ ಮುಂದಿರುವ ಸಮಸ್ಯೆಯನ್ನು ಪರಿಹರಿಸಿ ಎಲ್ಲರಿಗೂ ನ್ಯಾಯ ಒದಗಿಸುವುದಷ್ಟೇ ನ್ಯಾಯಾಲಯದ ಕರ್ತವ್ಯ. ಕೆಲವು ಪ್ರಕರಣಗಳು ಮಧ್ಯವರ್ತಿಗಳ ಮೂಲಕವೇ ಇತ್ಯರ್ಥವಾಗಿರುವಾಗ ನಿಮ್ಮ ವಿರೋಧ ಏನು ಎಂದು ಹಿಂದೂ ಮಹಾಸಭಾದ ಪರ ವಕೀಲರನ್ನು ಪ್ರಶ್ನೆ ಮಾಡಿದರು.

ಈ ಹಂತದಲ್ಲಿ ಮೊಘಲ ದೊರೆ ಬಾಬರ್ ತನ್ನ ಆಡಳಿತದಲ್ಲಿ ಏನು ಕಟ್ಟಿಸಿದ್ದ. ನಂತರ ಏನಾಯಿತು ಎಂಬುದು ಪರಿಗಣನೆಗೆ ಬರುವುದಿಲ್ಲ. ನೀವು ಇಂದಿನ ಸ್ಥಿತಿಗತಿಗೆ ತಕ್ಕಂತೆ ಚಿಂತಿಸಿ ಸಮಸ್ಯೆ ಪರಿಹಾರಕ್ಕೆ ಸಲಹೆಯನ್ನು ಕೊಡಿ ಎಂದು ನ್ಯಾ.ಬೊಬ್ಡೆ ಸೂಚಿಸಿದರು.

ಹಿಂದೂ ಮತ್ತು ಮುಸ್ಲಿಂ ಮುಖಂಡರು ಒಂದೆಡೆ ಕುಳಿತು ಸಮಸ್ಯೆ ಪರಿಹರಿಸಲು ಸಾಧ್ಯವಿರುವಾಗ ಆಕ್ಷೇಪಿಸುವುದು ಸರಿಯಲ್ಲ. ಶೇ.1ರಷ್ಟಾದರೂ ಅವಕಾಶವಿದ್ದಾಗ ನಾವು ಅದೇ ಹಾದಿಯಲ್ಲೇ ಹೋಗುವುದು ಸರಿಯಾದ ಮಾರ್ಗ ಎಂದರು.

ಇನ್ನು ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಮಧ್ಯವರ್ತಿಗಳ ನೇಮಕ ಸಂಬಂಧ ಪರ-ವಿರೋಧ ವ್ಯಕ್ತವಾಗಿದ್ದರಿಂದ ತೀರ್ಪನ್ನು ಸುಪ್ರೀಂಕೋರ್ಟ್ ತೀರ್ಮಾನಿಸಿದೆ.

ಕೇಂದ್ರ ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್ ವೇಣುಗೋಪಾಲ್ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ 14 ಅರ್ಜಿಗಳು ದಾಖಲಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ