![polio-drops](http://kannada.vartamitra.com/wp-content/uploads/2019/03/polio-drops-678x381.jpeg)
ಬೆಂಗಳೂರು,ಮಾ.6- ರಾಜ್ಯಾದ್ಯಂತ ಪೊಲೀಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಈ ಬಾರಿ ಒಂದೇ ಹಂತದಲ್ಲಿ ಮಾ. 10ರಂದು ನಡೆಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 5ವರ್ಷದೊಳಗಿನ ಎಲ್ಲಾ ಮಕ್ಕಳಿಗೆ 2ಹನಿ ಪೊಲೀಯೋ ಲಸಿಕೆ ಹಾಕಲಾಗುವುದು. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
10ನೇ ತಾರೀಖು ನಡೆಯುವ ಸಾರ್ವತ್ರಿಕ ಪೊಲೀಯೋ ಲಸಿಕೆ ಕಾರ್ಯಕ್ರಮದ ನಂತರ 3ದಿನಗಳ ಕಾಲ ಲಸಿಕೆ ಹಾಕಲಾಗುವುದು ರಾಜ್ಯಾದ್ಯಂತ ಒಟ್ಟು 6485980 ಮಕ್ಕಳಿದ್ದು ಇವರಿಗೆ ಲಸಿಕೆ ಹಾಕಲು 32571 ಪೊಲೀಯೋ ಲಸಿಕೆ ಹಾಕುವ ಭೂತ್‍ಗಳನ್ನು, 51918ತಂಡಗಳನ್ನು, 110354 ಕಾರ್ಯಕರ್ತರು, 7827ಮೇಲ್ವಿಚಾರಕರು ಹಾಗೂ 2441ಸಂಚಾರಿ ತಂಡವನ್ನು ರಚಿಸಲಾಗಿದ್ದು ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ.
ಗುಡ್ಡಗಾಡು, ಇಟ್ಟಿಗೆಭಟ್ಟಿ, ಕೈಗಾರಿಕಾ ವಲಯ, ರೈಲ್ವೆ ಸ್ಟೇಶನ್, ಮೆಟ್ರೋ ನಿಲ್ದಾಣಗಳು, ಬಸ್ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಲಸಿಕೆ ಹಾಕಲು ಕ್ರಮ ವಹಿಸಲಾಗಿದೆ. ಕಳೆದ ವರ್ಷ ಶೇ. 103ರಷ್ಟು ಕಾರ್ಯಕ್ರಮ ಯಶಸ್ವಿಯಾಗಿತ್ತು. 66.77ಲಕ್ಷ ಮಕ್ಕಳಿಗೆ ಲಸಿಕೆ ಹಾಕಲಾಗಿತ್ತು ಎಂದು ವಿವರಿಸಿದರು.
2014ರ ನಂತರ ಭಾರತ ಪೊಲೀಯೋ ಮುಕ್ತ ರಾಷ್ಟ್ರವಾಗಿದ್ದು 2018ರಲ್ಲಿ ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನಗಳಲ್ಲಿ 33ಪ್ರಕರಣಗಳು ಕಂಡು ಬಂದಿತ್ತು. ಕಳೆದ ಫೆಬ್ರವರಿ 27ರಂದು ಪಾಕಿಸ್ತಾನದಲ್ಲಿ 4 ಹಾಗೂ ಅಪ್ಘಾನಿಸ್ತಾನದಲ್ಲ 2ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ದೇಶ ಹಾಗೂ ರಾಜ್ಯದಲ್ಲಿ ಪೊಲೀಯೋ ಹರಡದಂತೆ ಹೆಚ್ಚಿನ ಮುಂಜಾಗ್ರತೆ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ , ಯುನಿಸೆಫ್, ಯುಎನ್‍ಡಿಪಿ, ರೋಟರಿ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ 5ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಸೂಚಿಸಿದರು.