ಮಾಜಿ ಪ್ರಧಾನಿ ದೇವೇಗೌಡ ಮತ್ತು ರಾಹುಲ್‍ಗಾಂಧಿಯವರ ಭೇಟಿ : ಚುನಾವಣಾ ಪೂರ್ವ ಹೊಂದಾಣಿಕೆ ಕುರಿತಂತೆ ನಡೆಸಿದ ಮೊದಲ ಚರ್ಚೆ

ನವದೆಹಲಿ, ಮಾ.6-ತಮ್ಮ ನಿವಾಸದಲ್ಲಿ ರಾಹುಲ್‍ಗಾಂಧಿಯವರನ್ನು ಭೇಟಿ ಮಾಡಿ ಲೋಕಸಭೆ ಚುನಾವಣೆ ಪೂರ್ವ ಮೈತ್ರಿ ಕುರಿತಂತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರು, ಚುನಾವಣಾ ಪೂರ್ವ ಹೊಂದಾಣಿಕೆ ಕುರಿತಂತೆ ನಡೆಸಿದ ಮೊದಲ ಚರ್ಚೆ ಇದು. ಜೆಡಿಎಸ್‍ನ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಆಲಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಚರ್ಚಿಸಿ ಸೀಟು ಹಂಚಿಕೆಯನ್ನು ಅಂತಿಮ ಮಾಡಲಿದ್ದಾರೆ ಎಂದುಹೇಳಿದರು.

ಈ ಸಂಬಂಧ ಡ್ಯಾನಿಷ್ ಆಲಿ ಅವರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ ಗೌಡರು, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‍ಗೆ 12 ಸ್ಥಾನಗಳನ್ನು ಬಿಟ್ಟುಕೊಡುವಂತೆ ಕೇಳಲಾಗಿತ್ತು. ಈ ವಿಚಾರವನ್ನು ರಾಹುಲ್‍ಗಾಂಧಿಯವರ ಗಮನಕ್ಕೂ ತರಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮಿತ್ರ ಪಕ್ಷಗಳು ಗೆಲುವು ಸಾಧಿಸುವ ನಿಟ್ಟಿನಲ್ಲಿ ಉಭಯ ನಾಯಕರು ಚರ್ಚೆ ಮಾಡಿದ್ದೇವೆ ಎಂದರು.

ಮೂರನೇ ಒಂದು ಭಾಗದಷ್ಟು ಸೀಟು ಜೆಡಿಎಸ್‍ಗೆ ನೀಡಬೇಕು. ಮೈತ್ರಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ಹಂಚಿಕೆಯಾಗಿರುವಂತೆ ಲೋಕಸಭೆ ಸೀಟುಗಳು ಹಂಚಿಕೆಯಾಗಬೇಕು. ಗೆಲ್ಲುವ ದೃಷ್ಟಿಯಿಂದ ಹಾಲಿ ಸಂಸದರ ಕ್ಷೇತ್ರಗಳನ್ನು ಬಿಟ್ಟುಕೊಡಿ. ಉಭಯ ಪಕ್ಷಗಳ ಉದ್ದೇಶ ಬಿಜೆಪಿ ಸೋಲಿಸುವುದು ಆಗಬೇಕು ಎಂಬುದನ್ನು ರಾಹುಲ್‍ಗಾಂಧಿಯವರ ಗಮನಕ್ಕೆ ತರಲಾಗಿದೆ ಎಂದರು.

ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಬೆಂಗಳೂರು ಉತ್ತರ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ವಿಜಯಪುರ ಹಾಗೂ ಬೀದರ್ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಗೌಡರು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಆಲಿ ಮಾತನಾಡಿ, ಮೈತ್ರಿ ಸರ್ಕಾರ ರಚನೆಯಾದ ಬಳಿಕ ಉಭಯ ನಾಯಕರು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ರಾಜಕೀಯ ವಿಚಾರಗಳ ಬಗ್ಗೆ ಸಮಾಲೋಚಿಸಿದ್ದಾರೆ. ದೇವೇಗೌಡರು ತಮ್ಮ ರಾಜಕೀಯ ಅನುಭವವನ್ನು ಹಂಚಿಕೊಂಡಿದ್ದಾರೆ. ಲೋಕಸಭೆ ಚುನಾವಣೆ ಸೀಟು ಹಂಚಿಕೆ ಸಂಬಂಧಿಸಿದಂತೆ ಚರ್ಚೆ ನಡೆದಿದ್ದು, ಬಿಜೆಪಿ ಶಕ್ತಿಯನ್ನು ಕುಗ್ಗಿಸುವ ಆಧಾರದ ಮೇಲೆ ಸೀಟು ಹಂಚಿಕೆಯಾಗಬೇಕೆಂಬ ಪ್ರಸ್ತಾಪವಾಗಿದೆ.

ಮತ್ತೊಮ್ಮೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆ ಚರ್ಚೆ ನಡೆಯಲಿದೆ. ಆನಂತರ ಹಿರಿಯ ನಾಯಕರು ಅಧಿಕೃತವಾಗಿ ಸೀಟು ಹಂಚಿಕೆಯ ನಿರ್ಧಾರ ಮಾಡಲಿದ್ದಾರೆ. ಪ್ರತಿ ಕ್ಷೇತ್ರದ ಬಗ್ಗೆಯೂ ಚರ್ಚೆ ನಡೆದಿದ್ದು, ಕೊಡು-ತೆಗೆದುಕೊಳ್ಳುವ ಬಗ್ಗೆ ಮಾತುಕತೆಯಾಗಿದೆ. ಒಟ್ಟಾರೆ ಬಿಜೆಪಿ ಸೋಲಿಸಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಚರ್ಚೆ ನಡೆದಿದೆ.

ಸಭೆಯಲ್ಲಿ ಕೆ.ಸಿ.ವೇಣುಗೋಪಾಲ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ