ಬೆಂಗಳೂರು, ಮಾ.6-ಚುನಾವಣಾ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆಯನ್ನು ಪ್ರತಿವರ್ಷ ಕಡ್ಡಾಯವಾಗಿ ನಿರ್ದಿಷ್ಟ ಅವಧಿಯಲ್ಲಿಯೇ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ಪಾಟೀಲ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅತ್ಯಂತ ಪಾರದರ್ಶಕವಾದ ಚುನಾವಣೆಯನ್ನು ಕೈಗೊಳ್ಳಲು ವ್ಯವಸ್ಥಿತ ಮತದಾರರ ಪಟ್ಟಿಯನ್ನು ಹೊಂದುವುದು ಮುಖ್ಯವಾಗಿರುತ್ತದೆ, ಅದರಿಂದ ಪ್ರತಿವರ್ಷ ಜನವರಿ 1ಕ್ಕೆ ಅನ್ವಯಿಸಿದಂತೆ 17ವರ್ಷಗಳನ್ನು ಪೂರ್ತಿಗೊಳಿಸಿ 18ನೆ ವರ್ಷಕ್ಕೆ ಪಾದಾರ್ಪಣೆಗೊಂಡ ಯುವಕ-ಯುವತಿಯರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದು ಮತ್ತು ವಿವರಗಳ ತಿದ್ದುಪಡಿ ಮಾಡುವುದು ಇತ್ಯಾದಿಗಳನ್ನು ನಿರ್ದಿಷ್ಟ ಅವಧಿಯಲ್ಲೆ ಕೈಗೊಳ್ಳವಂತಾಗಬೇಕು ಎಂದು ಹೇಳಿದರು.
ಮತದಾರರ ಹೆಸರುಗಳು ಕೇವಲ ಒಂದೇ ಕಡೆ ಮಾತ್ರ ನೊಂದಣಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಲು ಮತ್ತು ಬೋಗಸ್ ಮತದಾರರ ಹೆಸರುಗಳನ್ನು ಮತದಾರ ಪಟ್ಟಿಯಿಂದ ಕೈಬಿಡಲು ಮತದಾರ ಪಟ್ಟಿಗೆ ಆಧಾರ್ನಂಬರನ್ನು ಜೋಡಣೆ ಮಾಡುವುದು ಅತ್ಯಗತ್ಯ ಎಂದರು.