ಕಲಬುರಗಿ: ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸುವ ಉದ್ದೇಶದಿಂದ ಕಾಂಗ್ರೆಸ್ ತೊರೆದ ಉಮೇಶ್ ಜಾಧವ್ ಇಂದು ಯಡಿಯೂರಪ್ಪ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.
ಬಿಜೆಪಿ ಸಮಾವೇಶದಲ್ಲಿ ಮೋದಿ ಆಗಮನಕ್ಕೂ ಮುನ್ನ ಬಿಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ಜಾಧವ್, “ಒಂದು ಅವಕಾಶ ಕೊಡಿ, ಹೊಸ ಇತಿಹಾಸ ರಚನೆ ಮಾಡಲು ಮುಂದಾಗುತ್ತೇವೆ. ನಮಗೆ ಆಶೀರ್ವಾದ ನೀಡಿ,” ಎಂದು ಜನರಲ್ಲಿ ಮನವಿ ಮಾಡಿದರು.
ಕಮಲ ಪಾಳೆಯ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, ಬಿಜೆಪಿಗೆ ಸೇರ್ಪಡೆಯಾಗಿರುವುದು ಬಹಳ ಸಂತೋಷವಾಗಿದೆ. ಈ ವಾತಾವರಣ ನೋಡಿ ಖುಷಿಯಾಗುತ್ತಿದೆ. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವದಲ್ಲೇ ಹೆಸರು ಮಾಡಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ನಮ್ಮ ಆಶಯ ಎಂದರು.
ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದೇನೆ. ಜನ ಪ್ರತಿನಿಧಿಯಾದವರು ಹೇಗೆ ಕೆಲಸ ಮಾಡಬೇಕು. ಜನರೊಟ್ಟಿಗೆ ಹೇಗೆ ಬೆರೆಯಬೇಕು ಎಂಬುದನ್ನು ನಾವು ತೋರಿಸಬೇಕಿದೆ. ಅದಕ್ಕಾಗಿ ಒಂದು ಅವಕಾಶ ನೀಡಿ. ಒಳ್ಳೆಯ ಕೆಲಸ ಮಾಡಿ ತೋರಿಸುತ್ತೇನೆ. ಐತಿಹಾಸಕ ಫಲಿತಾಂಶ ಬರುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.
ರಾಜೀನಾಮೆ ನೀಡಿದ ಬಳಿಕ ನೂರಕ್ಕಿಂತ ಹೆಚ್ಚು ಸ್ವಾಮಿಗಳ ಆಶೀರ್ವಾದ ಪಡೆದಿದ್ದೇನೆ. ಸಿದ್ದೇಶ್ವರ ಸ್ವಾಮಿ ಆಶೀರ್ವಾದ ಕೂಡ ಪಡೆದಿದ್ದೇನೆ. ಸಾಯಿ ಮಂದಿರ, ರಾಮ ಮಂದಿರ, ಶರಣಬಸವೇಶ್ವರಕ್ಕೆ ಹೋಗಿ ನಂತರ ಬಿಜೆಪಿ ಸೇರಿದ್ದೇನೆ. ಈಗ ನನಗೆ ನೀವು ಆಶೀರ್ವಾದಿಸಬೇಕಿದೆ. ನಿಮ್ಮೆಲ್ಲರಲ್ಲೂ ಕೇಳಿಕೊಳ್ಳುತ್ತಿದ್ದೇನೆ, ನಿಮ್ಮ ಭರವಸೆ ಮೇಲೆ ಬಂದಿದ್ದೇನೆ. ಏನಾದರೂ ಮಾಡಿ, ಐತಿಹಾಸಿಕ ಗೆಲುವು ಕೊಡಿಸಿಕೊಡಿ ಎಂದು ಕೋರಿದರು.