ಮೆಲ್ಬೋರ್ನ್, ಮಾ.6- ಭಾರತ ಮೂಲದ ದಂತ ವೈದ್ಯೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಸಿಡ್ನಿಯ ಬಸ್ಟಿಸ್ಟ್ ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ಶವ ಪತ್ತೆಯಾಗಿದೆ.
ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿದ್ದ ಪ್ರೀತಿ ರೆಡ್ಡಿ ಅವರ ಶವ ಪತ್ತೆಯಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಸಿಡ್ನಿ ಪೊಲೀಸರು ತಿಳಿಸಿದ್ದಾರೆ.
ಈಕೆಯ ಮಾಜಿ ಪ್ರಿಯಕರ ಕೂಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೂಲಗಳ ಪ್ರಕಾರ ನಿನ್ನೆ ಕಿಂಗ್ಸ್‍ಪೋರ್ಡ್‍ನ ಸ್ಟ್ರಾಚನ್‍ಲೇನ್‍ನ ಕಾರು ನಿಲ್ದಾಣದಲ್ಲಿ ಪ್ರೀತಿರೆಡ್ಡಿ ಅವರ ಕಾರಿನ ಒಳಗಡೆಯೇ ಸೂಟ್‍ಕೇಸ್‍ನಲ್ಲಿ ದೇಹ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಆಕೆಯ ದೇಹದ ಹಲವು ಭಾಗಗಳಲ್ಲಿ ಇರಿತದ ಗಾಯದ ಗುರುತುಗಳು ಪತ್ತೆಯಾಗಿದ್ದು, ಹಂತಕರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಕಳೆದ ಭಾನುವಾರ ಜಾರ್ಜ್‍ಸ್ಟ್ರೀಟ್‍ನ ಮೆಕ್‍ಡೊನಾಲ್ಡ್ ಬಳಿ ಈಕೆ ಕಾಣಿಸಿಕೊಂಡಿರುವುದು ಈ ಪ್ರದೇಶದಲ್ಲಿರುವ ಸಿಸಿಟಿವಿಯಲ್ಲಿ ಕಂಡುಬಂದಿದೆ.
ಭಾನುವಾರ 11 ಗಂಟೆಗೆ ಪ್ರೀತಿರೆಡ್ಡಿ ಅವರು ತಮ್ಮ ಕುಟುಂಬ ಸದಸ್ಯರೊಬ್ಬರಿಗೆ ಕರೆ ಮಾಡಿ ತಾವು ಡೆಂಟಲ್ ಕಾನ್ಫರೆನ್ಸ್‍ವೊಂದರಲ್ಲಿ ಪಾಲ್ಗೊಂಡು ಸಿಡ್ನಿಗೆ ಆಗಮಿಸಿದ್ದು, ತಿಂಡಿ ತಿನ್ನುತ್ತಿದ್ದೇನೆ. ಬೇಗ ಮನೆಗೆ ಬರುತ್ತೇನೆ ಎಂದು ತಿಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ಸಹೋದ್ಯೋಗಿಗಳು ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದು, ನಮಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಆಕೆ ಭೇಟಿ ನೀಡಿದ್ದ ರೆಸ್ಟೋರೆಂಟ್‍ನಲ್ಲಿ ದಾಖಲಾಗಿರುವ ದೃಶ್ಯಗಳಲ್ಲಿ ಆಕೆ ಕೆಲ ಸಮಯ ಏಕಾಂಗಿಯಾಗಿ ಕುಳಿತಿರುವುದು ಪತ್ತೆಯಾಗಿದೆ.
ಒಟ್ಟಾರೆ ಭಾರತೀಯ ಮೂಲದ ವೈದ್ಯೆಯ ಹತ್ಯೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಸಿಡ್ನಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.