
ಕಲಬುರಗಿ: ಕೇಂದ್ರ ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸುವ ಸಲುವಾಗಿ ಬಿಜೆಪಿ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ಗೆ ಗಾಳ ಹಾಕಿ ಪಕ್ಷ ತೊರೆಯುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಹಲವು ದಿನಗಳಿಂದ ಉಮೇಶ್ ಜಾಧವ್ ಬಿಜೆಪಿ ಸೇರುವುದು ಬಹುತೇಕ ಖಚಿತ ಎನ್ನಲಾಗಿತ್ತು. ಈಗ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುವ ಮೂಲಕ ಕಾಂಗ್ರೆಸ್ಗೆ ಜಾಧವ್ ಸೆಡ್ಡು ಹೊಡೆದಿದ್ದಾರೆ. ಕಲಬುರಗಿಯಲ್ಲಿ ನಡೆದ ಸಮಾವೇಶದಲ್ಲಿ, ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೂ ಮುನ್ನವೇ ಜಾಧವ್ ಬಿಜೆಪಿ ಸೇರ್ಪಡೆಯಾದರು.
ಈ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ರಣಕಹಳೆಗೆ ಮುಂದಾಗಿರುವ ಬಿಜೆಪಿ ಅವರ ತವರು ಕ್ಷೇತ್ರದಿಂದಲೇ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದೆ. ಬಿಸಿಲ ನಗರಿಯಲ್ಲಿ ಇಂದು ಬಿಜೆಪಿ ನಡೆಸಲಿರುವ ಬೃಹತ್ ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಬಾರಿ ಸೋಲಿಸುವ ಗುರಿಯನ್ನು ಹೊಂದಿರುವ ಬಿಜೆಪಿ ಅದಕ್ಕಾಗಿ ಅವರ ಕ್ಷೇತ್ರದಿಂದಲೇ ಪ್ರಚಾರ ಹಮ್ಮಿಕೊಂಡಿದೆ.