ಕೊಯಮತ್ತೂರು: ಭಾರತೀಯ ಯಾವುಪಡೆ ಬಾಲಕೋಟ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ್ದು ನಿಜ. ಆದರೆ ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲಸವಲ್ಲ ಎಂದು ವಾಯುಸೇನೆ ಮುಖ್ಯಸ್ಥ ಬಿ.ಎಸ್ ಧನೋವಾ ತಿಳಿಸಿದ್ದಾರೆ.
ಏರ್ ಸ್ಟ್ರೈಕ್ ಕುರಿತು ವಿಪಕ್ಷಗಳು ಎಷ್ಟು ಉಗ್ರರು ಹತ್ಯೆಯಾಗಿದ್ದಾರೆ ಎಂದು ಪ್ರಶ್ನೆ ಮಾಡಿರುವುದಕ್ಕೆ ತಿರುಗೇಟು ಎಂಬಂತೆ ಉತ್ತರಿಸಿರುವ ಬಿಎಸ್ ಧನೋವಾ, ಕಾಡಿನಲ್ಲಿ ಬಾಂಬ್ ಹಾಕುವ ಅಗತ್ಯ ನಮಗೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಉಗ್ರರ ಕ್ಯಾಂಪ್ ಗಳನ್ನು ವಾಯುಸೇನೆ ಹೊಡೆದು ಹಾಕಿದ್ದು ನಿಜ. ಆದರೆ ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲಸವಲ್ಲ. ನಮಗೆ ಏನು ಗುರಿ ನೀಡಲಾಗಿತ್ತೋ ಆ ಗುರಿಯನ್ನು ಹೊಡೆದಿದ್ದೇವೆ. ಅರಣ್ಯದಲ್ಲಿ ಬಾಂಬ್ ಹಾಕಿದ್ದರೆ ಪಾಕಿಸ್ತಾನ ಯಾಕೆ ನಮ್ಮ ಮೇಲೆ ದಾಳಿ ನಡೆಸಬೇಕಿತ್ತು. ಅವರ ಪ್ರಧಾನಿ ಏಕೆ ಪ್ರತಿಕ್ರಿಯೆ ನೀಡುತ್ತಿದ್ದರು ಎಂದು ಪ್ರಶ್ನಿಸಿದರು.
ನೀಡಿದ್ದ ಗುರಿಯನ್ನು ಸರಿಯಾಗಿ ತಲುಪಿದ್ದೇವಾ ಇಲ್ಲವ್ವಾ ಎನ್ನುವುದು ಮಾತ್ರ ನಮ್ಮ ಕೆಲಸ. ಅದನ್ನು ಹೊರತು ಪಡಿಸಿ ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲಸವಲ್ಲ. ಆ ಕೆಲಸ ಏನಿದ್ದರೂ ಸರ್ಕಾರ ಮಾಡುತ್ತದೆ ಎಂದರು.
ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಗ್ಗೆ ಮಾತನಾಡಿ, ಅಭಿನಂದನ್ ಅವರ ಆರೋಗ್ಯ ಸ್ಥಿತಿ ನೋಡಿ ಅವರು ಮತ್ತೆ ಕೆಲಸಕ್ಕೆ ಹಾಜರಾಗಬಹುದಾ ಇಲ್ಲವಾ ಎಂಬುದು ತಿಳಿಯಲಿದೆ. ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರೆ ಅವರು ಪೈಲಟ್ ಆಗಿ ಮುಂದುವರಿಯಬಹುದು ಎಂದು ಹೇಳಿದರು.
ನಾವು ದಾಳಿಗೆ ಸಿದ್ಧರಾದಾಗ ಯಾವ ವಿಮಾನ ಬೇಕು ಯಾವುದು ಬೇಡ ಎನ್ನುವುದನ್ನು ಪ್ಲಾನ್ ಮಾಡುತ್ತೇವೆ. ಶತ್ರುಗಳು ನಮ್ಮ ಮೇಲೆ ಬಂದಾಗ ಯಾವ ವಿಮಾನವನ್ನು ಕಳುಹಿಸಬೇಕು ಎನ್ನುವುದನ್ನು ನಾವು ಪ್ಲಾನ್ ಮಾಡಲು ಸಾಧ್ಯವಿಲ್ಲ. ನಮ್ಮ ಬಳಿ ಇರುವ ಎಲ್ಲ ವಿಮಾನಗಳು ಶತ್ರುಗಳನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದರು.
ನಮ್ಮ ಮಿಗ್-21 ಜೆಟ್ ಯುದ್ಧ ವಿಮಾನ ಸಮರ್ಥವಾಗಿದೆ. ಮಿಗ್-21 ಅದ್ಭುತವಾದ ಏರ್ ಕ್ರ್ಯಾಫ್ಟ್. ಈ ಯುದ್ಧ ವಿಮಾನವನ್ನು ಅಪ್ಗ್ರೇಡ್ ಮಾಡಲಾಗಿದೆ. ಈ ವಿಮಾನದಲ್ಲಿ ಅದ್ಭುತವಾದ ರಡಾರ್ ಇದೆ ಹಾಗೂ ಏರ್ ಟು ಏರ್ ಮಿಸೈಲ್ ವೆಪನ್ ಸಿಸ್ಟಮ್ ಇದೆ ಎಂದು ತಿಳಿಸಿದರು.
ಇನು ಪ್ರಸ್ತುತ ಗಡಿಯಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ನಮ್ಮ ವಿರುದ್ಧ ಮಾಡಿದ ದಾಳಿ ವೇಳೆ ಅವರು ಎಫ್ 16 ವಿಮಾನವನ್ನು ಬಳಸಿದ್ದಾರೆ. ಯಾಕೆಂದರೆ ಎಫ್ 16 ನಲ್ಲಿ ಬಳಸುವ ಎಎಂಆರ್ಎಎಎಂ ಕ್ಷಿಪಣಿ ನಮ್ಮ ಭೂ ಪ್ರದೇಶದಲ್ಲಿ ಬಿದ್ದಿದೆ. ಅವರ ಎಫ್ 16 ವಿಮಾನವನ್ನು ನಾವು ಹೊಡೆದು ಹಾಕಿದ್ದೇವೆ ಎಂದು ತಿಳಿಸಿದರು. ಅಮೆರಿಕ ಮತ್ತು ಪಾಕಿಸ್ತಾನ ಮಧ್ಯೆ ಯಾವ ರೀತಿಯ ಒಪ್ಪಂದ ನಡೆದಿದೆ ಎನ್ನುವುದು ಗೊತ್ತಿಲ್ಲ. ಬೇರೆ ದೇಶದ ವಿರುದ್ಧದ ಎಫ್ 16 ಬಳಕೆ ಮಾಡಬಾರದು ಎನ್ನುವ ಒಪ್ಪಂದ ಇದ್ದರೆ ಪಾಕಿಸ್ತಾನ ಈ ನಿಯಮ ಉಲ್ಲಂಘನೆ ಮಾಡಿದೆ ಎಂದು ಹೇಳಬಹುದು ಎಂದರು.
balakot air strike, We hit the target, says Air Chief Marshal BS Dhanoa