ಮಂಡ್ಯ : ಲೋಕಸಭಾ ಚುನಾವಣಾ ಜಿದ್ಧಾ ಜಿದ್ದಿ ಕಣವಾಗಿರುವ ಸಕ್ಕರೆ ನಾಡಿನಲ್ಲಿ ಸುಮಲತಾ ಹಾಗೂ ಜೆಡಿಎಸ್ ನಡುವೆ ರಾಜಕೀಯ ತಾರಕಕ್ಕೇರಿದೆ. ಸ್ವತಂತ್ರ ಅಭ್ಯರ್ಥಿಯಾದರೂ ಸರಿ ಮಂಡ್ಯದಿಂದಲೇ ಚುನಾವಣೆಗೆ ನಿಲ್ಲುತ್ತೇನೆ ಎಂದವರು ಸ್ಪಷ್ಟಪಡಿಸಿದ್ದಾರೆ. ಸುಮಲತಾ ಅವರ ದೃಢ ನಿರ್ಧಾರದಿಂದ ಕಂಗಾಲಾಗಿರುವ ಜೆಡಿಎಸ್ ಈಗ ಕ್ಷೇತ್ರವನ್ನು ಬಿಟ್ಟುಕೊಡಲು ಸಜ್ಜಾಗಿದೆಯಾ ಎಂಬ ಅನುಮಾನ ಮೂಡುತ್ತಿದೆ. ಇದಕ್ಕೆ ಕಾರಣ ಜಿ.ಟಿ ದೇವೇಗೌಡ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಮಾತುಗಳು.
ಅಭಿಮಾನಿಗಳ ಮೇರೆಗೆ ಚುನಾವಣೆಗೆ ಸ್ಪರ್ಧಿಸಲು ನಿರ್ಧಾರ ಮಾಡಿದ ನಟಿ ಸುಮಲತಾ ಅಂಬರೀಷ್ ಇದಕ್ಕಾಗಿ ಕಾಂಗ್ರೆಸ್ ನಾಯಕರ ಸಲಹೆ ಪಡೆದಿದ್ದಾರೆ. ಎರಡು ಬಾರಿ ಕಾಂಗ್ರೆಸ್ನಿಂದ ಅಂಬರೀಷ್ ಸಚಿವರಾದ ಹಿನ್ನೆಲೆ ಕೈ ಮುಖಂಡರನ್ನು ಭೇಟಿಯಾಗಿ ಬೆಂಬಲ ಕೋರಿದ್ದರು. ಆದರೆ, ಮೈತ್ರಿಗೆ ಕಟ್ಟುಬಿದ್ದ ನಾಯಕರು, “ಆ ಕ್ಷೇತ್ರವನ್ನು ಈಗಾಗಲೇ ಜೆಡಿಎಸ್ಗೆ ಬಿಟ್ಟಕೊಡಬೇಕೆಂಬ ಮಾತಾಗಿದೆ. ಮಂಡ್ಯ ಬಿಟ್ಟು ಬೇರೆ ಯಾವ ಕ್ಷೇತ್ರವನ್ನಾದರೂ ಕೇಳಿ. ಬೇಕಾದಲ್ಲಿ ನೇರವಾಗಿ ದೊಡ್ಡ ಹುದ್ದೆಯನ್ನೇ ನೀಡುತ್ತೇವೆ. ಮಂಡ್ಯ ಕ್ಷೇತ್ರವನ್ನು ಬಿಟ್ಟು ಬಿಡಿ” ಎಂಬ ಸಲಹೆ ನೀಡಿದ್ದರು. ಇದರಿಂದಾಗಿ ಸುಮಲತಾ ಸಹ ಈಗ ಕೈ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಬೆಂಬಲವಿಲ್ಲದೆಯೂ ಸುಮಲತಾ ಚುನಾವಣೆಯಲ್ಲಿ ನಿಂತು ಗೆಲ್ಲುವುದು ತೀರಾ ಕಷ್ಟವಲ್ಲ ಎನ್ನುವ ಸತ್ಯ ಅರಿತ ಜೆಡಿಎಸ್ಗೆ ಈಗ ಸಂಕಷ್ಟ ಎದುರಾಗಿದೆ. ಸುಮಲತಾಗೆ ಇರುವ ಅನುಕಂಪದ ಅಲೆಯ ಮುಂದೆ ತಾವು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾ ಎಂಬ ಪ್ರಶ್ನೆ ಮೂಡಿದೆ. ಮಂಡ್ಯದಲ್ಲಿ ಸ್ಪರ್ಧಿಸಲು ಜೆಡಿಎಸ್ನ ಸ್ಥಳೀಯ ನಾಯಕರು ಕೂಡ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ, ನಿಖಿಲ್ ರಾಜಕೀಯ ಭವಿಷ್ಯಕ್ಕಾಗಿ ಕ್ಷೇತ್ರ ಬದಲಿಸುವ ತೀರ್ಮಾನ ಮಾಡಿದ್ದಾರಾ ಎಂಬ ಅನುಮಾನ ಕಾಡುತ್ತಿದೆ.