
ಬೆಂಗಳೂರು, ಮಾ.1- ಬಿಜೆಪಿಯವರು ಚುನಾವಣೆಯಲ್ಲಿ ಗೆಲ್ಲಲು ಧರ್ಮ, ದೇಶ ರಕ್ಷಣೆಯಂತಹ ವಿಷಯಗಳನ್ನು ಸ್ವಾರ್ಥದಿಂದ ನೋಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ವಾಗ್ದಾಳಿ ನಡೆಸಿದರು.
ಪಕ್ಷದ ಕಚೇರಿಯಲ್ಲಿಂದು ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ತಿಪ್ಪೇಸ್ವಾಮಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ನಂತರ ಮಾತನಾಡಿದ ಅವರು, ಬಿಜೆಪಿಯವರು ಎಲ್ಲವನ್ನೂ ಬಿಟ್ಟು ನಿಂತಿದ್ದಾರೆ. ಚುನಾವಣೆ ಗೆಲ್ಲಲು ಏನುಬೇಕಾದರೂ ಮಾಡುತ್ತಾರೆ. ಕಳೆದ ಐದು ವರ್ಷದಲ್ಲಿ ಬಿಜೆಪಿಯ ಸಂಸದರು ರಾಜ್ಯದ ಪರವಾಗಿ ಒಮ್ಮೆಯೂ ಧ್ವನಿ ಎತ್ತಲಿಲ್ಲ. ಸಾಲಮನ್ನಾ, ನೀರಾವರಿ ವಿಷಯದಲ್ಲಿ ಬರ -ನೆರೆಗೆ ಹಣ ತರುವ ನಿಟ್ಟಿನಲ್ಲಿ ಕೇಂದ್ರದಿಂದ ಯಾವುದೇ ಯೋಜನೆಗಳನ್ನು ಪಡೆದುಕೊಳ್ಳುವ ವೇಳೆ ರಾಜ್ಯದ ಸಂಸದರು ತುಟಿಬಿಚ್ಚಿಲ್ಲ. ಗುಪ್ತ ಕಾರ್ಯಸೂಚಿಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಯೋಧರ ಬಲಿದಾನದಲ್ಲೂ ರಾಜಕಾರಣ ಮಾಡುತ್ತಿರುವ ಬಿಜೆಪಿಯವರು ನಾಜಿಕೆಗೇಡಿನ ಜನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆ ಕ್ಷೇತ್ರ ಹಂಚಿಕೆ ಸಂಬಂಧಪಟ್ಟಂತೆ ಜೆಡಿಎಸ್-ಕಾಂಗ್ರೆಸ್ ನಡುವಿನ ಮಾತುಕತೆ ಇದೇ 4ರಂದು ಸಮನ್ವಯ ಸಮಿತಿ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಜನರ ಅಭಿಪ್ರಾಯಗಳನ್ನು ತಿಳಿದುಕೊಳ್ಳುವ ಸಲುವಾಗಿ ಈಗಾಗಲೇ ಪಕ್ಷದವತಿಯಿಂದ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಹೇಳಿದರು.