ಬೆಂಗಳೂರು, ಮಾ.1- ಶಾಲೆಯಲ್ಲಿ ಪೋಷಕರ ಮೀಟಿಂಗ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಬಂದ ಸರಗಳ್ಳರು 40 ಗ್ರಾಂ ಸರ ಎಗರಿಸಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕ ನಿವಾಸಿ ನೇತ್ರಾವತಿ ಎಂಬುವರು ನಿನ್ನೆ ಶಾಲೆಯಲ್ಲಿದ್ದ ಪೋಷಕರ ಮೀಟಿಂಗ್ನಲ್ಲಿ ಪಾಲ್ಗೊಂಡು ಮಧ್ಯಾಹ್ನ 2.20ರ ಸಮಯದಲ್ಲಿ ಮನೆಗೆ ಹಿಂದಿರುಗುತ್ತಿದ್ದರು.
ಅಗ್ರಹಾರಲೇಔಟ್ನ ಮಸೀದಿ ಬಳಿ ನೇತ್ರಾವತಿ ಬರುತ್ತಿದ್ದಾಗ ಡಿಯೋ ದ್ವಿಚಕ್ರವಾಹನದಲ್ಲಿ ಇಬ್ಬರು ಸರಗಳ್ಳರು ಇವರಿಗೆ ಡಿಕ್ಕಿ ಹೊಡೆಯುವ ರೀತಿಯಲ್ಲಿ ಬಂದು ಹಿಂದಿನಿಂದ 40 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ.
ತಕ್ಷಣ ನೇತ್ರಾವತಿಯವರು ಸಹಾಯಕ್ಕಾಗಿ ಕೂಗಿಕೊಂಡರಾದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.