ಹೈದರಾಬಾದ್, ಫೆ.27- ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಯುವತಿಯೊಬ್ಬಳನ್ನು ಬೆಂಕಿ ಹಚ್ಚಿ ಸಾಯಿಸಲು ಯತ್ನಿಸಿರುವ ಘಟನೆ ವಾರಂಗಲ್ನಲ್ಲಿ ಇಂದು ಬೆಳಗ್ಗೆ 9ರ ಸುಮಾರಿನಲ್ಲಿ ನಡೆದಿದೆ.
ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿ ರಾವಲಿ ಗಾಯಗೊಂಡಿರುವ ಯುವತಿ.
ಆರೋಪಿ ಅನ್ವೇಶ್ ಮತ್ತು ರವಳಿ ಇಬ್ಬರೂ ಕೃಷ್ಣಪುರಾದ ವಾಗ್ದೇವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಅನ್ವೇಶ್ ರವಳಿಯನ್ನು ಬಹಳ ದಿನಗಳಿಂದ ಮದುವೆಯಾಗುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.
ಇದಕ್ಕೆ ಒಪ್ಪದ ರಾವಲಿಯನ್ನು ಸದಾ ಹಿಂಬಾಲಿಸುತ್ತಿದ್ದ ಅನ್ವೇಶ್ ಇಂದು ಬೆಳಗ್ಗೆ ಮತ್ತೆ ಆಕೆಯ ಬಳಿ ಮದುವೆಯಾಗುವಂತೆ ಪೀಡಿಸಿದ್ದಾನೆ. ಇದನ್ನು ನಿರಾಕರಿಸಿದಾಗ ಬ್ಯಾಗ್ನಲ್ಲಿ ಮೊದಲೇ ಪೆಟ್ರೋಲ್ ತಂದಿದ್ದ ಅನ್ವೇಶ್ ಆಕೆ ಮೇಲೆ ಸುರಿದು ಹಲ್ಲೆ ಮಾಡಿ ಬೆಂಕಿ ಹಚ್ಚಿದ್ದಾನೆ ಎಂದು ಎಸಿಪಿ ಚಂದ್ರಯ್ಯ ತಿಳಿಸಿದ್ದಾರೆ.
ಘಟನೆ ಸ್ಥಳದಲ್ಲಿದ್ದ ಸಾರ್ವಜನಿಕರು ಆಕೆಗೆ ರಕ್ಷಣೆಗೆ ಮುಂದಾಗಲಿಲ್ಲ. ವಿದ್ಯಾರ್ಥಿನಿ ಕೆಳಗೆ ಬೀಳುತ್ತಿದ್ದಂತೆ ಹತ್ತಿರ ಬಂದು ಅವಳನ್ನು ಆಸ್ಪತ್ರೆಗೆ ಸಾಗಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪ್ರಸ್ತುತ ವಾರಂಗಲ್ನ ಎಂಜಿಎಂ ಆಸ್ಪತ್ರೆಯಲ್ಲಿ ರಾವಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಆದರೂ ಆಕೆ ಮಾತನಾಡುತ್ತಿದ್ದು, ಆಕೆಯಿಂದ ಹೇಳಿಕೆ ಪಡೆಯಲಾಗುತ್ತಿದೆ. ಕೃತ್ಯವೆಸಗಿ ಪರಾರಿಯಾಗಿರುವ ಅನ್ವೇಶ್ನ ವಿರುದ್ಧ ಐಪಿಸಿ ಸೆಕ್ಷನ್ 307 ಮತ್ತು 354ರಡಿಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಈ ತಿಂಗಳಲ್ಲಿ ನಡೆದಿರುವ ಎರಡನೇ ಘಟನೆ ಇದ್ದಾಗಿದ್ದು, 17 ವರ್ಷದ ಹುಡುಗಿ ಮೇಲೆ ಭರತ್ (19) ಎಂಬಾತ ಇದೇ ರೀತಿ ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದಕ್ಕೆ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದಿದ್ದ. ಇದರ ಬೆನ್ನಲ್ಲೇ ಮತ್ತೊಂದು ದುರ್ಘಟನೆ ನಡೆದಿದೆ.