ಬೆಂಗಳೂರು, ಫೆ.26-ಭಾರತೀಯ ವಾಯುಸೇನೆ ನಡೆಸಿರುವ ದಾಳಿ ಪಾಕಿಸ್ತಾನಕ್ಕೆ ಪ್ರತೀಕಾರದ ಉತ್ತರವಾಗಿದ್ದು, ನಮ್ಮ ದೇಶದ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶ ರವಾನಿಸಿದಂತಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ದಾಳಿಯಿಂದಾಗಿ ವೈಯಕ್ತಿಕವಾಗಿ ಸಮಾಧಾನವಾಗಿದೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಮತ್ತಷ್ಟು ಪಾಠ ಕಲಿಸಬೇಕಿದೆ. ಇನ್ನಾದರೂ ಪಾಕ್ ತೆರೆ ಮರೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬಿಡಬೇಕು ಎಂದರು.
ದೇಶದ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ. ದೇಶದ ಹಿತ ಕಾಯುವಲ್ಲಿ ಎಲ್ಲರೂ ಒಂದೇ. ದೇಶದ ಹಿತರಕ್ಷಣೆಗೆ ಇಡೀ ಜನಸಮೂಹವೇ ಒಟ್ಟಾಗಿದೆ. ವಾಯುಸೇನೆಯ ಈ ದಾಳಿ ಸ್ವಾಗತಾರ್ಹ ಎಂದು ತಿಳಿಸಿದರು.