ಬೆಂಗಳೂರು, ಫೆ.27- ಪಾರಿವಾಳಗಳು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ… ಅವುಗಳು ಹಾರಾಡುತ್ತ ತಮ್ಮ ಬಳಿ ಬಂದ್ರೆ ಮುದ್ದಾಡುತ್ತೇವೆ… ಆದರೆ ಅವುಗಳಿಗೆ ತೊಂದರೆಯಾದರೆ ಅವುಗಳ ನೆರವಿಗೆ ಹೋಗುವುದಿಲ್ಲ.
ಏಟು ಬಿದ್ದು ಪಾಲಿಕೆ ಆವರಣದಲ್ಲಿ ಪಾರಿವಾಳವೊಂದು ನರಳಾಡುತ್ತಿದ್ದರೂ ಸಿಬ್ಬಂದಿಗಳು ಆ ಕಡೆ ಗಮನ ಹರಿಸದಿರುವುದು ಮಾನವೀಯತೆ ಇಲ್ಲ ಎಂಬಂತಾಗಿದೆ.
ನಿನ್ನೆ ಆಕಸ್ಮಿಕವಾಗಿ ಪಾರಿವಾಳವೊಂದು ನೆಲಕ್ಕೆ ಬಿದ್ದಿದ್ದು, ಬಲವಾದ ಪೆಟ್ಟು ಬಿದ್ದಿದ್ದರಿಂದ ನೆಲದಲ್ಲೇ ನರಳಾಡುತ್ತಿತ್ತು. ಇಂದು ಪಾಲಿಕೆ ಕೌನ್ಸಿಲ್ ಇದ್ದಿದ್ದರಿಂದ ಬೆಳಗ್ಗೆಯೇ ಕಚೇರಿಗೆ ಆಗಮಿಸಿದ ಸಿಬ್ಬಂದಿಗಳು ಪಾರಿವಾಳವನ್ನು ನೋಡಿಯೂ ನೋಡದಂತೆ ಹೋಗುತ್ತಿದ್ದರು.
ಇಡೀ ರಾತ್ರಿ ಆಹಾರವಿಲ್ಲದೆ ಪಾರಿವಾಳ ಒದ್ದಾಡುತ್ತಿರುವುದನ್ನು ನಿರ್ಲಕ್ಷಿಸಿರುವುದು ಎಷ್ಟು ಸರಿ? ನನ್ನನ್ನು ಕಾಪಾಡಿ ಕಾಪಾಡಿ ಎಂದು ರೆಕ್ಕೆ ಬಡಿಯುತ್ತಿದ್ದರೂ ರಕ್ಷಿಸದ ಬಿಬಿಎಂಪಿ ರೆಸ್ಕ್ಯೂ ಟೀಮ್ ಸತತ 16 ಗಂಟೆಗಳ ನಂತರ ನೋವಿನಿಂದ ನೆಲದ ಮೇಲೆ ಒದ್ದಾಡುತ್ತಿದ್ದ ಮೂಕಪಕ್ಷಿಯ ಭಾಷೆಯನ್ನು ಅರ್ಥ ಮಾಡಿಕೊಂಡ ಮಾಧ್ಯಮ ಪ್ರತಿನಿಧಿಯೊಬ್ಬರು ಕಂಟ್ರೋಲ್ ರೂಮ್ಗೆ ಕರೆ ಮಾಡಿ ಮಾಹಿತಿ ನೀಡಿದರೂ ಸ್ಥಳಕ್ಕೆ ಯಾರೂ ಆಗಮಿಸಲಿಲ್ಲ. ಸತತ ಕರೆಯ ನಂತರ ಮಾನವೀಯತೆಯುಳ್ಳ ಸಿಬ್ಬಂದಿಯೊಬ್ಬರು ಪಾರಿವಾಳವನ್ನು ಚಿಕಿತ್ಸೆಗಾಗಿ ಕರೆದುಕೊಂಡ ಹೋದ ಪ್ರಸಂಗ ನಡೆಯಿತು.