ಆಸೀಸ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಸೋಲೋ ಮೂಲಕ ಗಾಯಗೊಂಡ ಹುಲಿಯಾಗಿರೋ ಟೀಂ ಇಂಡಿಯಾ, ಪಿಂಚ್ ಪಡೆಗೆ ತಿರುಗೇಟು ನೀಡೋಕೆ ಭರ್ಜರಿ ತಯಾರಿ ನಡೆಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೊಹ್ಲಿ ಪಡೆ ಗೆಲ್ಲುವ ವಿಶ್ವಾಸದಲ್ಲಿದೆ. ಕಳೆದೆರಡು ದಿನಗಳ ಹಿಂದೆಯೇ ಬೆಂಗಳೂರಿಗೆ ಆಗಮಿಸಿರೋ ಟೀಂ ಇಂಡಿಯಾ ನೆಟ್ನಲ್ಲಿ ಭಾರಿ ಕಸರತ್ತು ನಡೆಸಿದೆ.
ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿರೋ ರೋಹಿತ್ ಶರ್ಮಾ, ಇಂದು ಸಿಡಿದೇಳಬೇಕಿದೆ. ಕನ್ನಡಿಗ ಕೆ.ಎಲ್.ರಾಹುಲ್ ಬ್ಯಾಟಿಂಗ್ ಲಯಕ್ಕೆ ಬಂದಿರೋದು ನಾಯಕ ಕೊಹ್ಲಿ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಂತಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಈಗಾಗಲೇ ಪಾರ್ಕಿಂಗ್ಗೆ ನಿಷೇಧ ಹೇರಲಾಗಿದ್ದು, ಸಂಜೆ ನಂತರ ಸಂಚಾರ ಬಂದ್ ಆಗಲಿದೆ. ಹಲವು ದಿನಗಳ ಬಳಿಕ ಬೆಂಗಳೂರಿನಲ್ಲಿ ಹೈವೋಲ್ಟೇಜ್ ಪಂದ್ಯದಲ್ಲಿ ವೇದಿಕೆ ಸಿದ್ಧವಾಗಿದ್ದು, ರೋಚಕ ಹೋರಾಟವನ್ನು ಕಣ್ತುಂಬಿಕೊಳ್ಳೋಕೆ ಕ್ರೀಡಾಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20ಯಲ್ಲಿ ಸೋಲು ಕಂಡಿದ್ದ ಟೀಮ್ ಇಂಡಿಯಾ, ನಾಳೆ ನಡೆಯುವ 2ನೇ ಪಂದ್ಯ ಗೆದ್ದು ಸರಣಿ ಸಮ ಮಾಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದೆ. ಇದಕ್ಕಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಕೆಲ ಬದಲಾವಣೆ ಮಾಡಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ವೇಗಿ ಉಮೇಶ್ ಯಾದವ್, ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದ ಆಲ್ರೌಂಡರ್ ಕೃನಾಲ್ ಪಾಂಡ್ಯ, ಪ್ಲೇಯಿಂಗ್ ಇಲೆವೆನ್ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಅವರ ಸ್ಥಾನದಲ್ಲಿ ಸಿದ್ಧಾರ್ಥ್ ಕೌಲ್, ವಿಜಯ್ ಶಂಕರ್ ಕಣಕ್ಕಿಳಿಸಿಲು ಕೊಹ್ಲಿ ಚಿಂತಿಸುತ್ತಿದ್ದಾರೆ ಎನ್ನಲಾಗ್ತಿದೆ.