ಬೆಂಗಳೂರು, ಫೆ.26- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವನ್ನೇ ಮಾನದಂಡವಾಗಿಟ್ಟು ಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಹೈಕಮಾಂಡ್ ಮಟ್ಟದಲ್ಲಿ ಸೀಟು ಹೊಂದಾಣಿಕೆ ಮಾಡಿಕೊಳ್ಳಲು ಉದ್ದೇಶಿಸಿವೆ.
ಹಾಲಿ ಕಾಂಗ್ರೆಸ್ ಸಂಸದರಿರುವ ಕೆಲವು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಜೆಡಿಎಸ್ ಬೇಡಿಕೆ ಮುಂದಿಟ್ಟಿದ್ದು, ಈ ವಿಚಾರದ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕರು ಜೆಡಿಎಸ್ಗೆ ಸಲಹೆ ಮಾಡಿದ್ದಾರೆ.
ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ, ಬೆಂಗಳೂರು ಉತ್ತರ, ರಾಯಚೂರು, ವಿಜಯಪುರ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಸುಮಾರು 12 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಜೆಡಿಎಸ್ ಪಕ್ಷ ಕಾಂಗ್ರೆಸ್ನ್ನು ಕೋರಿದೆ.
ಹಳೆ ಮೈಸೂರು ಭಾಗದ ಬದಲಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಕ್ಷೇತ್ರಗಳನ್ನು ಬಿಟ್ಟುಕೊಡಲು ಕಾಂಗ್ರೆಸ್ ಸಿದ್ದವಿದ್ದರೂ, ಜೆಡಿಎಸ್ಗೆ ಉತ್ಸಾಹವಿಲ್ಲ.
ಅದರಲ್ಲೂ ತುಮಕೂರು ಮತ್ತು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಗಳಿಗೆ ಜೆಡಿಎಸ್ ಪಟ್ಟು ಹಿಡಿದಿದೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ನ ಹಾಲಿ ಸಂಸದರು ಇರುವುದರಿಂದ ರಾಜ್ಯ ಕಾಂಗ್ರೆಸ್ ನಾಯಕರು ಯಾವುದೇ ಭರವಸೆಯನ್ನು ನೀಡಿಲ್ಲ.
ಆದರೆ, ಉಭಯ ಪಕ್ಷಗಳ ರಾಜ್ಯ ನಾಯಕರು ಪರಸ್ಪರ ಕ್ಷೇತ್ರ ಹೊಂದಾಣಿಕೆಗೆ ಸಹಮತ ವ್ಯಕ್ತಪಡಿಸಿದ್ದು, ಬಿಜೆಪಿಯನ್ನು ಮಣಿಸಿ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಮಿತ್ರ ಪಕ್ಷಗಳು ಗೆಲ್ಲಬೇಕು ಎಂಬ ಅಪೇಕ್ಷೆ ಹೊಂದಿವೆ. ಹೀಗಾಗಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸಬೇಕೆಂಬ ನಿರ್ಧಾರದಲ್ಲಿ ಉಭಯ ಪಕ್ಷಗಳ ನಡುವೆ ಒಮ್ಮತ ಮೂಡಿವೆ.
ನಿನ್ನೆ ರಾಜ್ಯಮಟ್ಟದ ಉಭಯ ಪಕ್ಷಗಳ ನಾಯಕರು ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಂಡು ಚುನಾವಣಾ ಕಾರ್ಯತಂತ್ರದ ಬಗ್ಗೆ ಸಮಾಲೋಚಿಸಿದ್ದಾರೆ.
ಸಮನ್ವಯ ಸಮಿತಿ ಸಭೆಯಲೂ ಚುನಾವಣೆ ಪೂರ್ವ ಮೈತ್ರಿ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ನಂತರ ಹೈಕಮಾಂಡ್ ಅಂಗಳದಲ್ಲಿ ಸೀಟು ಹೊಂದಾಣಿಕೆಯನ್ನು ಅಂತಿಮಗೊಳಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಹಾಲಿ ಸಂಸದರಿರುವ ಒಂದೆರಡು ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡುವ ಬಗ್ಗೆಯೂ ಚಿಂತನೆ ನಡೆಸಿರುವ ಕಾಂಗ್ರೆಸ್ ನಾಯಕರು ಪಕ್ಷದ ಹೈಕಮಾಂಡ್ ಹಂತದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ನಿಲುವಿಗೆ ಬಂದಿದ್ದಾರೆ.
ಟಿಕೆಟ್ ವಂಚಿತರಾಗುವ ಸಂಸದರಿಗೆ ಪರ್ಯಾಯ ಸ್ಥಾನಮಾನ ಕಲ್ಪಿಸಿ ಸಮಾಧಾನಪಡಿಸುವ ಉದ್ದೇಶವನ್ನು ಹೊಂದಿದ್ದಾರೆ. ಹೀಗಾಗಿ ಮಾರ್ಚ್ ಮೊದಲ ವಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಚುನಾವಣಾ ಪೂರ್ವ ಹೊಂದಾಣಿಕೆ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳಲಿದೆ. ಜೆಡಿಎಸ್ ಸುಮಾರು 12 ಕ್ಷೇತ್ರಗಳಿಗೆ ಪ್ರಸ್ತಾಪ ಮುಂದಿಟ್ಟಿದ್ದರೂ 6ರಿಂದ 8 ಕ್ಷೇತ್ರಗಳನ್ನು ನೀಡಲು ಯಾವುದೇ ತಕರಾರಿಲ್ಲ.
ಆದರೆ, ಉಭಯ ಪಕ್ಷಗಳು ಪ್ರಬಲವಾಗಿರುವ 2-3 ಕ್ಷೇತ್ರಗಳಲ್ಲಿ ಮಾತ್ರ ಹೊಂದಾಣಿಕೆ ವಿಚಾರ ಅಂತಿಮವಾಗಬೇಕಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.