ಸೀಟು ಹಂಚಿಕೆ ವಿಷಯ ಚರ್ಚೆ-ಮಾ.4ರಂದು ಸಮನ್ವಯ ಸಮಿತಿ ಸಭೆ

ಬೆಂಗಳೂರು, ಫೆ.27-ಲೋಕಸಭೆ ಚುನಾವಣೆಯಲ್ಲಿ ದೋಸ್ತಿ ಪಕ್ಷಗಳ ಮೈತ್ರಿ ಮುಂದುವರೆಯಲು ಸೀಟು ಹಂಚಿಕೆ ವಿಷಯ ಚರ್ಚಿಸಲು ಮಾ.4 ರಂದು ಸಮನ್ವಯ ಸಮಿತಿ ಸಭೆ ಕರೆಯಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆಯುವ ಸಮನ್ವಯ ಸಮಿತಿ ಸಭೆಯಲ್ಲಿ ಜೆಡಿಎಸ್‍ನಿಂದ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಡ್ಯಾನಿಷ್ ಆಲಿ, ಕಾಂಗ್ರೆಸ್‍ನಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಭಾಗವಹಿಸಲಿದ್ದಾರೆ.

ಜಾತ್ಯತೀತ ಮತಗಳು ವಿಭಜನೆಯಾಗಿ ಬಿಜೆಪಿಗೆ ಅನುಕೂಲವಾಗುವುದನ್ನು ತಪ್ಪಿಸಲು ಚುನಾವಣಾ ಪೂರ್ವ ಮೈತ್ರಿಗೆ ಈಗಾಗಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಸೀಟು ಹಂಚಿಕೆ ಸಂಬಂಧಪಟ್ಟಂತೆ ಎರಡೂ ಪಕ್ಷಗಳ ನಡುವೆ ಇನ್ನೂ ಒಮ್ಮತ ಮೂಡಿಲ್ಲ. ಜೆಡಿಎಸ್ 12 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕೇಳುತ್ತಿದ್ದು, ಕಾಂಗ್ರೆಸ್ 5-6 ಕ್ಷೇತ್ರಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿದೆ.

ಹೀಗಾಗಿ ಚರ್ಚೆಗಳು ಇನ್ನೂ ಅಂತಿಮಗೊಂಡಿಲ್ಲ. ಹೈಕಮಾಂಡ್‍ನ ನಿರ್ದೇಶನದ ಮೇರೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಇತ್ತೀಚೆಗೆ ಜೆಡಿಎಸ್‍ನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮತ್ತು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಅಲ್ಲಿ ಕೂಡ ಒಮ್ಮತದ ನಿರ್ಧಾರ ತೆಗೆದುಕೊಳ್ಳಲು ಸಾದ್ಯವಾಗಿಲ್ಲ.

ಮುಂದಿನ ಚರ್ಚೆಗಳೇನಿದ್ದರೂ ದೆಹಲಿ ಮಟ್ಟದಲ್ಲಿ ನಡೆಯಲಿವೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರ್ವಭಾವಿಯಾಗಿ ಕರ್ನಾಟಕದಲ್ಲಿ ಮಾತುಕತೆ ನಡೆಸುವ ಸಂಬಂಧ ಸಿದ್ದರಾಮಯ್ಯ ಅವರು ಮಾ.4 ರಂದು ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಸಮನ್ವಯ ಸಮಿತಿ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕ್ಷೇತ್ರಗಳ ಹಂಚಿಕೆ ಸಂಬಂಧಪಟ್ಟಂತೆ ಚರ್ಚೆ ನಡೆಯಲಿದೆ. ನಂತರ ದೆಹಲಿಗೆ ಚರ್ಚೆ ಸ್ಥಳಾಂತರಗೊಳ್ಳಲಿದೆ.

ಕಾಂಗ್ರೆಸ್ ಹಾಲಿ ಸಂಸದರನ್ನು ಹೊಂದಿರುವ ಕ್ಷೇತ್ರಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದೆ. ಆದರೆ ಜೆಡಿಎಸ್ ಹಳೇ ಮೈಸೂರು ಭಾಗದಲ್ಲಿ ತಮ್ಮ ಪಕ್ಷ ಪ್ರಬಲವಾಗಿದ್ದು, ಈ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿದೆ. ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಮೈತ್ರಿಯೊಂದಿಗೆ ಚುನಾವಣೆ ಎದುರಿಸಬೇಕು ಎಂಬುದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಅಭಿಮತವಾಗಿದೆ. ಆದರೆ ಕ್ಷೇತ್ರಗಳ ಹಂಚಿಕೆ ಬಗೆಹರಿಯದೆ ಇರುವುದರಿಂದ ಮೈತ್ರಿ ಕೂಡ ಕಗ್ಗಂಟಾಗುತ್ತಿದೆ. ಚುನಾವಣೆಗೆ ಇನ್ನೇನು ದಿನಾಂಕ ಘೋಷಣೆಯಾಗುವ ಸಾಧ್ಯತೆಗಳಿದ್ದು, ಈವರೆಗೂ ಅಭ್ಯರ್ಥಿಗಳ ಆಯ್ಕೆ ನಡೆಯದೆ ಇರುವುದರಿಂದ ಎರಡೂ ಪಕ್ಷಗಳು ಪ್ರಚಾರದಲ್ಲಿ ಹಿಂದೆ ಬಿದ್ದಿವೆ.

ಬಿಜೆಪಿ 25 ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡು ಈಗಾಗಲೇ ಅಖಾಡಕ್ಕಿಳಿದಿದೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಈವರೆಗೂ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಅಂತಿಮ ನಿರ್ಣಯಕ್ಕೆ ಬರಲಾಗದೆ ತಿಣುಕಾಡುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ