ಬೆಂಗಳೂರು, ಫೆ.27- ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಂಡ ಭಾರತೀಯ ಸೇನಾ ಯೋಧರಿಗೆ ಪಾಲಿಕೆ ಸಭೆಯಲ್ಲಿಂದು ಗೌರವ ಸಲ್ಲಿಸಲಾಯಿತು.
ಸಭೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಬೋಲೋ ಭಾರತ್ ಮಾತಾಕಿ ಜೈ, ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಗಳನ್ನು ಕೂಗಿ ಯೋಧರಿಗೆ ಗೌರವ ಸೂಚಿಸಿದರು.
ನಂತರ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮಾತನಾಡಿ, 350 ಮಂದಿ ಪಾಕ್ ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆಗೆ ನಮ್ಮದೊಂದು ಸೆಲ್ಯೂಟ್. ಪಕ್ಷಾತೀತವಾಗಿ ಎಲ್ಲರೂ ಯೋಧರ ಕಾರ್ಯವನ್ನು ಸ್ವಾಗತಿಸಬೇಕು. ಪ್ರತಿಯೊಬ್ಬರೂ ಸಹ ದೇಶ ಕಾಯುವ ಸೈನಿಕರಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.
ಶಿಕ್ಷೆಗೆ ಆಗ್ರಹ: ಕಮ್ಮನಹಳ್ಳಿ ವಾರ್ಡ್ನ ರಾಜ್ಕುಮಾರ್ ಉದ್ಯಾನವನದಲ್ಲಿ ವಿದ್ಯುತ್ ಅವಘಡದಲ್ಲಿ ಬಾಲಕನೊಬ್ಬ ಬಲಿಯಾಗಿದ್ದಾನೆ. ಈ ಪಾರ್ಕ್ ಅನ್ನು ಬಿಡಿಎಯವರು ನಿರ್ವಹಣೆ ಮಾಡುತ್ತಿದ್ದಾರೆ. ಪಾರ್ಕ್ಅನ್ನು ಯಾರೇ ನಿರ್ವಹಣೆ ಮಾಡಲಿ, ಒಬ್ಬರ ಮೇಲೊಬ್ಬರು ವಾದ ಮಾಡಿದರೆ ನ್ಯಾಯ ಸಿಗುವುದಿಲ್ಲ.
ಹಾಗಾಗಿ ಮೇಯರ್ ಅವರು ಮುಖ್ಯ ಅಭಿಯಂತರರ ನೇತೃತ್ವದಲ್ಲಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಭವಿಷ್ಯದಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ. ಪಾಲಿಕೆ ವ್ಯಾಪ್ತಿಯಲ್ಲಿನ ಬೋರ್ವೆಲ್ಗಳು ಬರಿದಾಗುತ್ತಿವೆ. ಜಲಮಂಡಳಿ ಜತೆಗೂಡಿ ಟ್ಯಾಂಕರ್ಗಳ ಮೂಲಕ ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಸರಬರಾಜು ಮಾಡಬೇಕು ಎಂದರು.
ನೀರಿನ ಮೀಸಲಾತಿ ಅನುದಾನಕ್ಕೆ 4ಜಿ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದರು. ಹೆಬ್ಬಾಳ ಮೇಲ್ಸೇತುವೆ ಬಳಿ ಬಿಡಿಎಯವರು ನಾಮಫಲಕ ಅಳವಡಿಕೆಗೆ ಮುಂದಾಗಿದ್ದಾರೆ. ಇದಕ್ಕೆ ಅನುಮತಿ ನೀಡಿದವರು ಯಾರು ಎಂಬುದಕ್ಕೆ ಆಯುಕ್ತರು ಉತ್ತರ ನೀಡಬೇಕು ಎಂದು ತಿಳಿಸಿದರು.
ಅಮಾನತು: ವಿದ್ಯುತ್ ಅವಘಡದಿಂದ ಬಾಲಕ ಸಾವನ್ನಪ್ಪಿರುವ ಸ್ಥಳಕ್ಕೆ ಮೇಯರ್ ಗಂಗಾಂಬಿಕೆ ಭೇಟಿ ನೀಡಿದ್ದರೂ ಅದನ್ನು ಅಧಿಕಾರಿಗಳು ಸ್ಥಳೀಯ ಕಾರ್ಪೊರೇಟರ್ ಗಮನಕ್ಕೆ ತಂದಿಲ್ಲ. ನನಗೆ ಅವಮಾನವಾಗಿದೆ ಎಂದು ಕೋದಂಡರೆಡ್ಡಿ ಸಭೆಗೆ ತಿಳಿಸಿದರು.
ಕೆಲ ಕಾರಣಗಳಿಂದ ಅಧಿಕಾರಿಗಳು ಸದಸ್ಯರ ಗಮನಕ್ಕೆ ತಂದಿಲ್ಲ. ಮುಂದೆ ಈ ರೀತಿ ಆಗುವುದಿಲ್ಲ ಎಂದು ಮೇಯರ್ ತಿಳಿಸಿದರು.
ಮೇಯರ್ ಅವರ ಭೇಟಿ ವಿಷಯವನ್ನು ಗಮನಕ್ಕೆ ತರದ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಿ ಎಂದು ಪದ್ಮನಾಭರೆಡ್ಡಿ ಒತ್ತಾಯಿಸಿದರು.
ಅಂದು ಪೂರ್ವ ವಲಯದ ಜಂಟಿ ಆಯುಕ್ತರು ನ್ಯಾಯಾಲಯದಲ್ಲಿದ್ದರಿಂದ ಕಾರ್ಪೊರೇಟರ್ ಗಮನಕ್ಕೆ ತರಲು ಸಾಧ್ಯವಾಗಿಲ್ಲ. ಮುಂದೆ ಈ ರೀತಿ ಆಗುವುದಿಲ್ಲ ಎಂದರು.