
ನವದೆಹಲಿ: ಪಾಕಿಸ್ತಾನದಲ್ಲಿರುವ ಉಗ್ರರ ಅಡಗುದಾಣ ಬಾಲಾಕೋಟ್ ಮೇಲೆ ಭಾರತದ ವಾಯುಸೇನೆ ದಾಳಿ ನಡೆಸಿದ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಬಿಗಡಾಯಿಸಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ತೀವ್ರ ಕಟ್ಟೆಚ್ಚರವಹಿಸಲಾಗಿದೆ.
ಗಡಿ ಭಾಗಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದ್ದು, ವಿಮಾನ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ರಜೆಯ ಮೇಲೆ ತಮ್ಮ ಊರುಗಳಿಗೆ ತೆರಳಿರುವ ಸೇನಾಪಡೆ ಯೋಧರಿಗೆ ಮತ್ತು ಇತರ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
ಪಾಕಿಸ್ತಾನ ವಾಯುಪಡೆಯಿಂದ ಯಾವುದೇ ಸಂಭವನೀಯ ದಾಳಿಗೆ ಪ್ರತ್ಯುತ್ತರ ನೀಡಲು ಐಎಎಫ್ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ(Loc) ನಲ್ಲಿ ಎಲ್ಲಾ ಸೂಕ್ತ ರಕ್ಷಣಾ ವ್ಯವಸ್ಥೆಗಳನ್ನು ಕೈಗೊಂಡಿದೆ. ಅಂತರಾಷ್ಟೀಯ ಬಾರ್ಡರ್ ಮತ್ತು LoC ಉದ್ದಕ್ಕೂ ಯಾವುದೇ ಒಳನುಗ್ಗುವವರನ್ನು ಎದುರಿಸಲು ವಾಯುಗಾಮಿ ರೇಡಾರ್ಗಳನ್ನು ಒಳಗೊಂಡಂತೆ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ. ಗಡಿಗಳ ಉದ್ದಕ್ಕೂ ಐಎಎಫ್ ನೆಲೆಗಳು ಯಾವುದೇ ಸಂಭವನೀಯತೆಯನ್ನು ಎದುರಿಸಲು ಸಂಪೂರ್ಣ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.
ಪಾಶ್ಚಿಮಾತ್ಯ ನೇವ್ ಕಮಾಂಡ್ ಸಹ ಹೆಚ್ಚಿನ ನಿಗಾ ವಹಿಸಲು ಮತ್ತು ಪಾಕಿಸ್ತಾನದಿಂದ ಯಾವುದೇ ದಾಳಿಗೆ ಪ್ರತಿಕ್ರಿಯೆಯನ್ನು ನೀಡಲು 24/7 “ಸಂಪೂರ್ಣವಾಗಿ ಸಜ್ಜಾಗಿರುವುದಾಗಿ” ತಿಳಿಸಿದೆ.
ಪಾಕಿಸ್ತಾನದೊಂದಿಗಿನ ಗಡಿಯನ್ನು ಹಂಚಿಕೊಳ್ಳುವ ಹಲವಾರು ರಾಜ್ಯಗಳಲ್ಲಿನ ಭದ್ರತೆಯನ್ನೂ ಕೂಡ ಹೆಚ್ಚಿಸಲಾಗಿದೆ. ವಾಯುದಾಳಿ ನಂತರ ಗುಜರಾತ್, ಪಂಜಾಬ್, ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ “ಹೈ ಅಲರ್ಟ್” ಘೋಷಿಸಲಾಗಿದೆ.
ಪಾಕಿಸ್ತಾನದೊಂದಿಗೆ 553-ಕಿಮೀ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿರುವ ಪಂಜಾಬ್ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಅಮರೀಂದರ್ ಸಿಂಗ್ LoC ಯ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯಾವುದೇ ದಾಳಿಯನ್ನು ಎದುರಿಸಲು ರಾಜ್ಯದ ಸನ್ನದ್ಧತೆಯ ಭಾಗವಾಗಿ ಹಲವು ಕ್ರಮಗಳನ್ನು ಕೈಗೊಳ್ಳಲು ಆದೇಶಿಸಲಾಗಿದೆ.
ಮಹಾರಾಷ್ಟ್ರದಲ್ಲಿ, ಪ್ರಸಕ್ತ ಪರಿಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನಹರಿಸಲು ಸೂಚಿಸಲಾಗಿದೆ.
ಇಂಟೆಲಿಜೆನ್ಸ್ ಏಜೆನ್ಸಿಗಳು ಈಗಾಗಲೇ ಮುಂಬೈ ಪೊಲೀಸರಿಗೆ ಎಚ್ಚರಿಕೆಯನ್ನು ನೀಡಿವೆ ಮತ್ತು ಸಾರ್ವಜನಿಕ ಸ್ಥಳಗಳು, ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಜಾಗೃತಿ ಮತ್ತು ಸಿ.ಸಿ.ಟಿ.ವಿ ಕಣ್ಗಾವಲುಗಳನ್ನು ಹೆಚ್ಚಿಸಿವೆ.