ಮೈಸೂರು, ಫೆ.26- ಮಹಾನಗರ ಪಾಲಿಕೆಯ 2019-20ನೇ ಸಾಲಿನ ಆಯವ್ಯಯವನ್ನು ಪಾಲಿಕೆ ಸಭಾಂಗಣದಲ್ಲಿ ತೆರಿಗೆ ನಿರ್ಧಾರಣಾ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಮಂಡಿಸಿದರು.
ಒಟ್ಟು 78025.84 ಲಕ್ಷ ಗಾತ್ರದ ಬಜೆಟನ್ನು ಮಂಡಿಸಿದರು. ಈ ಬಾರಿ ನೀರಿನ ತೆರಿಗೆ ಸಂಗ್ರಹಕ್ಕಾಗಿ ಇ-ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. 1.56 ಲಕ್ಷ ಗ್ರಾಹಕರಿಗೆ ನಗರ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುತ್ತಿದ್ದು, ನೀರಿನ ಶುಲ್ಕವನ್ನು ಗ್ರಾಹಕರು ಸೇವಾ ಕೇಂದ್ರಗಳಲ್ಲಿ ಹಣ ಪಾವತಿಸಬೇಕಿತ್ತು.
ಆದರೆ, ಇನ್ನು ಮುಂದೆ ನೀರಿನ ಶುಲ್ಕವನ್ನು ಇ-ಪೇಮೆಂಟ್ ಮೂಲಕ ಪಾವತಿಸಲು ಅನುಕೂಲವಾಗುವಂತೆ ಭಾರತ ಬಿಲ್ ಪೇಮೆಂಟ್ ಸಿಸ್ಟಮ್ (ಬಿಬಿಪಿಎಸ್) ಮೂಲಕ ಪಾವತಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ದೇವರಾಜು ಅರಸು ರಸ್ತೆಯನ್ನು ಎರಡು ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಕುಡಿಯುವ ನೀರಿನ ಸಮರ್ಪಕ ವಿತರಣೆಗೆ ಮಳೆ ನೀರು ಕೊಯ್ಲು ಅಳವಡಿಕೆ ಬಗ್ಗೆ ಅರಿವು ಮೂಡಿಸಲು ಪ್ರಾಯೋಗಿಕವಾಗಿ ಸುಸಜ್ಜಿತ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರವಾಸಿಗರು, ಸಾರ್ವಜನಿಕರು ಸಂಚರಿಸುವ, ಜನ ಸಂದಣಿ ಸ್ಥಳಗಳಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗಾಗಿ ಪಿಂಕ್ ಶೌಚಾಲಯ ನಿರ್ಮಾಣ ಮಾಡಲು 10 ಲಕ್ಷ ರೂ.ಕಾಯ್ದಿರಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮೈಸೂರಿಗೆ ಪ್ರವಾಸಿಗರು ಹೆಚ್ಚು ಬರುತ್ತಿದ್ದು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಹಾಗೂ ಪುರಭವನದದ ಬಳಿ ಆಧುನಿಕ ತಂತ್ರಜ್ಞಾನವುಳ್ಳ ಎಲ್ಲ ವರ್ಗದ ಜನರ ಉಪಯೋಗಕ್ಕೆ ಶೌಚಾಲಯ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.
ಸ್ವಚ್ಛ ಮೈಸೂರು ಯೋಜನೆಯಡಿ ನಗರ ಸರ್ಕಾರಿ ಬಸ್ಗಳಲ್ಲಿ ಹಾಗೂ ಆಟೋರಿಕ್ಷಾಗಳಲ್ಲಿ ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವು ಮೂಡಿಸಲು ಡಸ್ಟ್ಬಿನ್ ಅಳವಡಿಸಲು 25 ಲಕ್ಷ ಮೀಸಲು.
ಹಸಿರು ಅಂಗಡಿ ಯೋಜನೆಯಡಿ ಮೈಸೂರು ನಗರವನ್ನು ಪ್ಲ್ಯಾಸ್ಟಿಕ್ ಮುಕ್ತ ನಗರವಾಗಿಸಲು ಯೋಜನೆಯನ್ನು ಸಿದ್ದಪಡಿಸಲಾಗಿದೆ. ಈ ಮೂಲಕ ಪ್ಲ್ಯಾಸ್ಟಿಕ್ ನಿಯಂತ್ರಣ ಮಾಡಿ ಪರ್ಯಾಯವಾಗಿ ಬಟ್ಟೆ-ಪೇಪರ್ನಿಂದ ತಯಾರಿಸಿರುವ ವಸ್ತು ಬಳಸಲು ಜನರನ್ನು ಉತ್ತೇಜಿಸಲು ಹಸಿರು ಅಂಗಡಿ ಸ್ಥಾಪಿಸಲಾಗುತ್ತಿದೆ.
ಮೈಸೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಈಜುಕೊಳ ನಿರ್ಮಾಣಕ್ಕೆ ಒಂದು ಕೋಟಿ ಕಾಯ್ದಿರಿಸಲಾಗಿದೆ. ನಗರದ ಪ್ರಮುಖ ವೃತ್ತಗಳ ಸೌಂದರ್ಯ ವೃದ್ಧಿಗೆ ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಕೇಬಲ್ ರಹಿತ ರಸ್ತೆ ನಿರ್ಮಾಣ ಯೋಜನೆಯಡಿ ನಗರದ ಒಂದು ಪ್ರಮುಖ ರಸ್ತೆಯನ್ನು ಇದೇ ಮೊದಲ ಬಾರಿಗೆ ಕೇಬಲ್ ರಹಿತ ರಸ್ತೆ ಮಾಡಲು ಒಂದು ಕೋಟಿ ಮಂಜೂರು ಮಾಡಲಾಗಿದೆ.
ಹೃದಯ ಭಾಗದಲ್ಲಿರುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಕಾರಂಜಿ ಕೆರೆ ಅಭಿವೃದ್ಧಿಗೆ ಒಂದು ಕೋಟಿ ಮೀಸಲು.
ಬಜೆಟ್ ಆರಂಭಕ್ಕೂ ಮುನ್ನ ಪುಲ್ವಾಮಾ ದಾಳಿಗೆ ತುತ್ತಾದ ವೀರ ಯೋಧರಿಗೆ ಮೌನಾಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಇದೆ ವೇಳೆ ಸರ್ಜಿಕಲ್ ಸ್ಟ್ರೈಕ್ಗೆ ಅಭಿನಂದಿಸಲಾಯಿತು.
ಪಾಲಿಕೆ ಸದಸ್ಯ ರಾಮಕೃಷ್ಣ ಅವರು ಗಾಂಧಿ ಟೋಪಿ ಧರಿಸಿ ಭಾರತದ ಸುವರ್ಣ ಧ್ವಜ ಹಿಡಿದು ಬಂದು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಘೋಷಣೆ ಕೂಗಿದರು.
ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಶಫೀ ಅಹಮ್ಮದ್, ಆಯುಕ್ತ ಶಿಲ್ಪಾನಾಗ್ ಉಪಸ್ಥಿತರಿದ್ದರು.