ತಿಪಟೂರು, ಫೆ.26-ರಾಷ್ಟ್ರೀಯ ಹೆದ್ದಾರಿ 206ರ ಅಗಲೀಕರಣದಲ್ಲಿ ಬೈಪಾಸ್ ರಸ್ತೆಯ ನಿರ್ಮಾಣಕ್ಕಾಗಿ ನಾವು ಭೂಮಿಯನ್ನು ಕೊಡುವುದೂ ಇಲ್ಲ, ನೀವು ನೀಡುವ ಪುಡಿಗಾಸಿನ ಪರಿಹಾರವೂ ಬೇಡವಾಗಿದ್ದು, ಸರ್ಕಾರಿ ಅಧಿಸೂಚನೆಯಂತೆ ಇಲ್ಲಿಯವರೆಗೆ ಕಳೆದುಕೊಂಡಿರುವ ರೈತರುಗಳ ಜಮೀನಿಗೆ ಪರಿಹಾರದ ಹಣ ನೀಡಬೇಕೆಂದು ರಾಷ್ಟೀಯ ಹೆದ್ದಾರಿ 206 ರಸ್ತೆಗಾಗಿ ಭೂಮಿಯನ್ನು ಕಳೆದುಕೊಂಡಿರುವ ರೈತರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಕಾರ್ಮಿಕ ಸಂಘಟನೆಯ ಸ್ವಾಮಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬೈಪಾಸ್ ರಸ್ತೆಯ ನಿರ್ಮಾಣಕ್ಕಾಗಿ ಸರ್ಕಾರ ರೈತರ ಭೂಮಿಯನ್ನು ಪಡೆದುಕೊಂಡು ರಸ್ತೆ ನಿರ್ಮಾಣ ಮಾಡಲು ತಯಾರಿ ನಡೆಸಿದ್ದು, ರೈತರಿಗೆ ನೀಡುತ್ತಿರುವ ಪರಿಹಾರದ ಹಣ ಸಾಕಾಗುವುದಿಲ್ಲ ಎಂದು ಸುಮಾರು 3 ವರ್ಷಗಳಿಂದಲೂ ಪ್ರತಿಭಟನೆ ಮಾಡುತ್ತಾ ಬಂದಿದ್ದೇವೆ. ರೈತರ ಮಾತಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ರೈತರು ಇತ್ತ ಜಮೀನುಗಳನ್ನು ಕಳೆದುಕೊಂಡು ಅವರು ಕೊಡುವ ಪರಿಹಾರದಲ್ಲಿ ತಮ್ಮ ಜೀವನವನ್ನು ನಡೆಸಲಾಗದೆ ಬೀದಿಪಾಲಾಗುವಂತಾಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಅವರು, ಸರ್ಕಾರ ರೈತರಿಗೆ ಪರಿಹಾರ ಹಣ ನೀಡುವುದೂ ಬೇಡ, ಅವರು ಜಮೀನನ್ನೂ ಕೊಡುವುದಿಲ್ಲ.
ಈ ಯೋಜನೆಯನ್ನು ಇಲ್ಲಿಗೆ ನಿಲ್ಲಿಸಿ ಈಗಾಗಲೆ ಜಮೀನನ್ನು ಅಧಿಸೂಚನೆಯಾದಾಗಿನಿಂದ ಇಲ್ಲಿಯವರೆಗಿನ ಫಲವಾಗಿ ನಮಗೆ ಅಗತ್ಯ ಪರಿಹಾರವನ್ನು ನೀಡಿ ಎಂದು ಆಗ್ರಹಿಸಿದರು.
ಈ ಹಿನ್ನೆಲೆಯಲ್ಲಿ ಮಾ.11ರಂದು ತುಮಕೂರಿನಲ್ಲಿ ಎನ್.ಎಚ್.ಎ.ಐ.ನ ಯೋಜನಾ ನಿರ್ದೇಶಕ(ಪಿ.ಡಿ.) ಕಛೇರಿಗೆ ಮುತ್ತಿಗೆ ಹಾಕಲಾಗುತ್ತಿದ್ದು, ಅಲ್ಲಿಯವರೆಗೂ ಪ್ರತಿಭಟನೆಗಳು ನಡೆಯುತ್ತಲೆ ಇರುತ್ತವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತಸಂಘದ ತಿಮ್ಲಾಪುರ ದೇವರಾಜು, ಆರ್‍ಕೆಎಸ್ ಬೈರನಾಯಕನಹಳ್ಳಿ ಲೋಕೇಶ್, ಮನೋಹರ್, ಶೆಟ್ಟಿಹಳ್ಳಿ ಕುಪ್ಪೂರಲಿಂಗಯ್ಯ, ಮಹೇಶ್, ಕೋಟನಾಯಕನಹಳ್ಳಿ ಶಿವಬಸವಯ್ಯ, ಹುಚ್ಚಗೊಂಡನಹಳ್ಳಿ ಲೋಕೇಶ್, ಸದಾಶಿವಯ್ಯ, ನಂಜಾಮರಿ, ಈಡೇನಹಳ್ಳಿ ಸಿದ್ಧರಾಮಣ್ಣ, ಕಂಚಾಘಟ್ಟ ರಂಗದಾಮಯ್ಯ, ಗುಬ್ಬಿ ತಾಲ್ಲೂಕು ಮತಿಘಟ್ಟದ ರಾಜು, ಅರಿವೆಸಂದ್ರ ನಟರಾಜ್ ಸೇರಿದಂತೆ ಮಾದೀಹಳ್ಳಿ, ಬೈರನಾಯ್ಕನಹಳ್ಳಿ ರೈತರು ಭಾಗವಹಿಸಿದ್ದರು.