ಶಾಸಕ ರವೀಂದ್ರರವರಿಂದ ನಿಮಿಷಾಂಬ ದೇವಸ್ಥಾನದ ವಿವಿಧ ಕಾಮಗಾರಿಗಳಿಗೆ ಚಾಲನೆ

ಶ್ರೀರಂಗಪಟ್ಟಣ,ಫೆ.26 -ಪಟ್ಟಣದ ಹೊರವಲಯದಲ್ಲಿರುವ ಗಂಜಾಂನ ಶ್ರೀ ನಿಮಿಷಾಂಬ ದೇಗುಲದ ಸ್ನಾನಘಟ್ಟದ ಬಳಿ 5 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ನಿಮಿಷಾಂಬ ತಾಯಿಯ ದರ್ಶನಕ್ಕಾಗಿ ರಾಜ್ಯ, ಹೊರ ರಾಜ್ಯದಿಂದ ಭಕ್ತರು ಆಗಮಿಸುತ್ತಾರೆ. ಬರುವ ಭಕ್ತರ ಅನುಕೂಲಕ್ಕಾಗಿ ಕಾವೇರಿ ನೀರಾವರಿ ನಿಗಮದಿಂದ 5 ಕೋಟಿ ರೂ. ಅನುದಾನದಲ್ಲಿ ದೇಗುಲ ಸ್ನಾನಘಟ್ಟದ ಬಳಿ ಕಾವೇರಿ ನದಿಗೆ 350 ಮೀಟರ್ ಉದ್ದದ ತಡೆಗೋಡೆ , 15 ಮೀಟರ್ ಉದ್ದದ 7 ಸೋಪಾನಕಟ್ಟೆ , 5 ಸ್ನಾನಘಟ್ಟ , ದೇವಾಲಯದ ಎದುರು ಡಬಲ್ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಆದ್ಯತೆ ಮೇರೆಗೆ ಕ್ಷೇತ್ರದಾದ್ಯಂತ ರಸ್ತೆ, ಚರಂಡಿ, ಸಮುದಾಯ ಭವನ, ಕುಡಿಯುವ ನೀರು, ಪಿಕಪ್ ನಾಲೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡುತ್ತಿದ್ದೇನೆಂದು ಹೇಳಿದರು.

ನಿಮಿಷಾಂಬ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂಜಾಂಶಿವು, ದೇವಾಲಯದ ಇಒ ನಂಜೇಗೌಡ, ಕಾವೇರಿ ನೀರಾವರಿ ನಿಗಮದ ಎಇಇ ತಮ್ಮೇಗೌಡ, ಸದಸ್ಯರಾದ ಗಂಜಾಂ ಮಂಜು, ಪಾರ್ವತಮ್ಮ , ಈ.ಪ್ರಕಾಶ್, ಶಂಕರ್, ಪುರಸಭೆ ಸದಸ್ಯರಾದ ಎಸ್.ಪ್ರಕಾಶ್, ಪದ್ಮಮ್ಮ, ನಂದೀಶ್, ಮಾಜಿ ಸದಸ್ಯರಾದ ಸಾಯಿಕುಮಾರ್, ಕೃಷ್ಣಪ್ಪ, ಗುತ್ತಿಗೆದಾರ ಮೋಹನ್ ಹಾಗೂ ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ