ಕೆಜಿಎಫ್, ಫೆ.26- ಚುನಾವಣೆಯಲ್ಲಿ ಬಳಸುವ ಇವಿಎಂ ಯಂತ್ರಗಳ ಬಗ್ಗೆ ಜನರಿಗೆ ಇರುವ ಅಪನಂಬಿಕೆಯನ್ನು ಹೋಗಲಾಡಿಸಿ, ಎಲ್ಲರೂ ಮತದಾನ ಮಾಡುವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಗದೀಶ್ ಹೇಳಿದರು.
ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರಿಗೆ , ಕಕ್ಷಿದಾರರು ಮತ್ತು ಸಿಬ್ಬಂದಿಗಳಿಗೆ ಮತ ಯಂತ್ರದ ಪ್ರಾತ್ಯಕ್ಷಿಕೆ ತೋರಿಸಿ ಮಾತನಾಡಿದ ಅವರು, ಕಳೆದ ಎರಡು ಮೂರು ಚುನಾವಣೆಯಲ್ಲಿ ಈ ಯಂತ್ರಗಳು ಯಶಸ್ವಿಯಾಗಿ ಕೆಲಸ ನಿರ್ವಹಿಸಿದೆ. ಒಳ್ಳೆಯ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ.ಇದನ್ನು ಹ್ಯಾಕ್ ಮಾಡಲುಸಾಧ್ಯವೇ ಇಲ್ಲ. ಚುನಾವಣೆ ಆಯೋಗ ನೀಡಿದ ಚಾಲೆಂಜ್‍ನ್ನು ಯಾರೂ ಒಪ್ಪಿಕೊಳ್ಳಲಿಲ್ಲ. ಅಲ್ಲದೆ ಇದರಲ್ಲಿ ಪಾರದರ್ಶಕತೆ ಇರಲಿದ್ದು, ಎಲ್ಲಾ ರಾಜಕೀಯ ಪಕ್ಷಗಳವರು ಜೊತೆಯಲ್ಲಿ ಎಲ್ಲಾ ಪ್ರಕ್ರಿಯೆಯಲ್ಲಿಯೂ ಭಾಗವಹಿಸಬಹುದು.ತಮ್ಮ ಅನುಮಾನಗಳನ್ನು ಆಗಲೇ ಬಗೆಹರಿಸಿಕೊಳ್ಳಬಹುದು ಎಂದರು.
ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಹೊರಬಾರದು.ಅನುಮಾನವಿದ್ದವರು 1950 ಕ್ಕೆ ದೂರವಾಣಿ ಮಾಡಿದರೆ, ನಾವೇ ಅವರನ್ನು ಹುಡುಕಿಕೊಂಡು ಬರುತ್ತೇವೆ ಎಂದು ಹೇಳಿದರು.
3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಜಗದೀಶ್ವರ ಮಾತನಾಡಿ, ನಾವು ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು.ಕನಿಷ್ಠ ಮತದಾನವಾಗಬಾರದು. ಇದರಿಂದಾಗಿ ಒಳ್ಳೆಯ ಅಭ್ಯರ್ಥಿ ಸಿಗುವುದಿಲ್ಲ ಎಂದರು.
ನ್ಯಾಯಾಧೀಶರಾದ ದಯಾನಂದ, ಲೋಕೇಶ್, ವಕೀಲರ ಸಂಘದ ನಾಗರಾಜ್, ಜ್ಯೋತಿ ಬಸು ಹಾಜರಿದ್ದರು.ನಗರಸಭೆ ಆಯುಕ್ತ ಆರ್.ಶ್ರೀಕಾಂತ್ ಕಾರ್ಯಕ್ರಮ ನಿರ್ವಹಿಸಿದರು.